ಬಾಗಲಕೋಟೆ: ಕಬ್ಬಿಗೆ ಏಕರೂಪ ಬೆಲೆ ನಿಗದಿ (Uniform Price For Sugarcane) ಹಾಗೂ ಬಾಕಿ ಹಣ ಪಾವತಿಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ (Mudhol) ತಾಲೂಕಿನ ರೈತರು (Farmers) ನಡೆಸುತ್ತಿರುವ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದೆ.
ಬೆಲೆ ನಿಗದಿ ಮಾಡಿ ಕಾರ್ಖಾನೆಗಳನ್ನು ಆರಂಭಮಾಡಿ ಎಂಬ ರೈತರ ಅಗ್ರಹಕ್ಕೆ ಮಣಿಯದ ಕಾರ್ಖಾನೆ ಮಾಲೀಕರು ಇದೇ ತಿಂಗಳ 8 ರಿಂದಲೇ ಕಾರ್ಯಾರಂಭ ಶುರುಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು 4 ದಿನಗಳಿಂದ ಮುಧೋಳ ನಗರದ ರಾಯಣ್ಣ ಸರ್ಕಲ್ ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬಾಗಲಕೋಟೆ (Bagalkot) ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ಪ್ರತಿಭಟನೆ ಮಾಡಿದ್ದ ರೈತರು, ರಾಷ್ಟ್ರೀಯ ಹೆದ್ದಾರಿ 218 ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದರು. ಆದರೆ ರೈತರ ಪ್ರತಿಭಟನೆಗೆ ಜಗ್ಗದೇ ಕೆಲ ಕಾರ್ಖಾನೆಗಳು ಕಬ್ಬು ನುರಿಸುವ ಕೆಲಸ ಶುರುಮಾಡಿಕೊಂಡಿವೆ. ಹೀಗಾಗಿ ರೈತರು ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಿದ್ದಾರೆ.
ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಗಡುವು ನೀಡಿರುವ ರೈತರು ಇನ್ನೆರಡು ದಿನಗಳಲ್ಲಿ ರೈತರ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ ನ.17ರಂದು ಸಹಕಾರ ಸಪ್ತಾಹ ಕಾರ್ಯಕ್ರಮಕ್ಕಾಗಿ ಜಿಲ್ಲೆಗೆ ಆಗಮಿಸುತ್ತಿರುವ ಸಿಎಂಗೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಂದು ವೇದಿಕೆಗೆ ಹೋಗುವ ಮುನ್ನ ಸಿದ್ದರಾಮಯ್ಯ ರೈತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಅಲ್ಲಿಂದಲೇ ರೈತರು ನೇರವಾಗಿ ವೇದಿಕೆಗೆ ತೆರಳಿ ಘೇರಾವ್ ಹಾಕಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.