ಕಾರವಾರ: ಅಂಕೋಲಾ (Ankola) ತಾಲೂಕಿನ ಶಿರೂರಿನಲ್ಲಿ (Shiruru) ಸಂಭವಿಸಿದ್ದ ಗುಡ್ಡಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಶವ ಪತ್ತೆಯಾಗಿದೆ.
ಜುಲೈ 16 ರಂದು ಭೂಕುಸಿತ (Land Slide) ಸಂಭವಿಸಿದಾಗ ಅರ್ಜುನ್ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ ಕೋಝಿಕ್ಕೋಡ್ (Kozhikode) ಕಡೆಗೆ ಹೋಗುತ್ತಿದ್ದರು. ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಅರ್ಜುನ್ ಶವ ಇದೀಗ ಪತ್ತೆಯಾಗಿದೆ.
ಕಳೆದ ಆರು ದಿನಗಳಿಂದ ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಬುಧವಾರ ನದಿಯಲ್ಲಿ ಕಾರ್ಯಾಚರಣೆ ವೇಳೆ ಅರ್ಜುನ್ ಶವ ಹಾಗೂ ಲಾರಿ ಪತ್ತೆಯಾಗಿದೆ. ಅರ್ಜುನ್ ಚಲಾಯಿಸುತ್ತಿದ್ದ ಕೇರಳ ಮೂಲದ ಲಾರಿ ಸಿಕ್ಕಿದೆ. ಪತ್ತೆಯಾಗಿರುವ ಲಾರಿ ಗುಡ್ಡಕುಸಿತದ ಭೀಕರತೆಯನ್ನು ತೋರಿಸುತ್ತಿದೆ. ಗುಡ್ಡಕುಸಿತದಲ್ಲಿ ಸಿಲುಕಿ ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಜುಲೈ 16 ರಂದು ಭೂಕುಸಿತ ಸಂಭವಿಸಿದ ಬಳಿಕ ಕೇರಳದ (Kerala) ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಗಂಗಾವಳಿ ನದಿಗೆ (Gangavali River) ಬಿದ್ದಿತ್ತು. ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು.
ಈಗಾಗಲೇ ಟ್ರಕ್ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ಪತ್ತೆಯಾಗಿತ್ತು. ಇದೀಗ ಅರ್ಜುನ್ ಚಲಾಯಿಸುತ್ತಿದ್ದ ಕೇರಳ ಮೂಲದ ಲಾರಿ ಪತ್ತೆಯಾಗಿದೆ.