ಬೆಳಗಾವಿ: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಇದೀಗ ವರದಿ ಬಗ್ಗೆ ಕೇಂದ್ರ ಸರ್ಕಾರವೂ ಉತ್ತರ ನೀಡಿದೆ. ಈಗ ಅದಕ್ಕೆ ಕರ್ನಾಟಕ ಸರ್ಕಾರ ಮರು ಉತ್ತರ ಕೊಡಬೇಕಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಲಿಂಗಾಯತ ಧರ್ಮ ವಿಚಾರದಲ್ಲಿ ಏನೆಲ್ಲ ನಡೆದಿದೆ ಗೊತ್ತು. ಹೆಚ್.ಡಿ ಕುಮಾರಸ್ವಾಮಿ ಲಿಂಗಾಯತ ಧರ್ಮದ ಫೈಲ್ ಮುಟ್ಟಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು ಎಂದು ಕಿಡಿಕಾರಿದ್ದಾರೆ.
2018ರ ನವೆಂಬರ್ 3ರಂದು ಭಾರತ ಸರ್ಕಾರದವರು ಉತ್ತರ ಕೊಟ್ಟಿದ್ದಾರೆ. ಮೂರು ಕಾರಣಗಳಿಂದ ಮಾನ್ಯತೆ ಮಾಡಲು ಕಷ್ಟವಾಗುತ್ತಿದೆ ಎಂದಿದ್ದಾರೆ. ಲಿಂಗಾಯತರಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರಿದ್ದಾರೆ. ಲಿಂಗಾಯತರಲ್ಲಿ ಸಮಗಾರ, ಮಾದರರು ಅಂತಾ ಹಲವರು ಇದ್ದಾರೆ. ಸ್ವತಂತ್ರ ಮಾನ್ಯತೆ ಕೊಟ್ರೆ ಎಸ್‌ಸಿಎಸ್‌ಟಿ ಸಮುದಾಯದ ಜನರಿಗೆ ಸವಲತ್ತು ಸಿಗಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ ಎಂದರು.
ಇದು ಸಂಪೂರ್ಣ ಸುಳ್ಳು ಹೇಳಿಕೆ ಸತ್ಯಕ್ಕೆ ದೂರವಾದ ಹೇಳಿಕೆ.
ಸಿಖ್ ಧರ್ಮದಲ್ಲಿ ದಲಿತರು ಇದ್ದಾರೆ. 1964ರಲ್ಲಿ ಸಿಖ್ ಧರ್ಮದ ದಲಿತರಿಗೆ ಇರುವ ಸವಲತ್ತು ಮುಂದುವರಿಸುವ ಬಗ್ಗೆ ರಾಷ್ಟ್ರಾಧ್ಯಕ್ಷರು ಆದೇಶ ಹೊರಡಿಸಿದ್ದರು.
ಬೌದ್ಧ ಧರ್ಮದಲ್ಲಿ ಇರುವ ಎಲ್ಲ ದಲಿತರಿಗೂ ಎಸ್‌ಸಿ ಎಸ್‌ಟಿ ಸವಲತ್ತು ಮುಂದುವರಿಸುವ ಆದೇಶ ಹೊರಡಿಸಿದ್ದಾರೆ. ಅದೇ ರೀತಿಯ ನೋಟಿಫಿಕೇಶನ್ ಹೊರಡಿಸಲು ಇರುವ ತೊಂದರೆಯಾದರ ಏನು? ಎರಡನೇಯದಾಗಿ 1871ರ ಜನಗಣತಿಯಿಂದ ಈವರೆಗೂ ಲಿಂಗಾಯತರನ್ನು ಹಿಂದೂ ಧರ್ಮದ ಪಂಥ ಅಂತಾ ಪರಿಗಣಿಸಲಾಗಿದೆ ಎಂದಿದ್ದಾರೆ. ಇದು ಕೂಡ ಸುಳ್ಳು, ನಮ್ಮ ಹತ್ತಿರ ದಾಖಲೆ ಇದೆ.ಲಿಂಗಾಯತ ಧರ್ಮ ಅದು ಜಾತಿ ಅಲ್ಲ ಅಂತಾ ಹೇಳಿದ ದಾಖಲೆ ಇದೆ.ಲಿಂಗಾಯತ ಹಿಂದೂ ಧರ್ಮದ ಭಾಗ ಅಲ್ಲ ಅಂತಾ ಹೇಳಿದ ದಾಖಲೆ ಇದೆ. 1871ರ ಪುಸ್ತಕದಲ್ಲಿ ದಾಖಲೆ ಇದೆ ಆ ಪ್ರತಿ ನಾವು ಅವರಿಗೆ ಕೊಡುತ್ತೇವೆ ಎಂದರು.