ಬೆಳಗಾವಿ : ಗಡಿ ವಿವಾದ ದಿನೇ ದಿನೆ ತಾರಕಕ್ಕೇರುತ್ತಿದ್ದು, ಪ್ರತಿಭಟನೆಗಳು, ಆಕ್ರೋಶಗಳು ಹೆಚ್ಚತೊಡಗಿವೆ. ಅಲ್ಲದೆ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಎರಡು ಬಣಗಳು ಸಹ ಅತಿರೇಕದಿಂದ ವರ್ತನೆ ಮಾಡುತ್ತಿವೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ ಶಿವಸೇನೆಯ ಕಾರ್ಯಕರ್ತರು ಮೀರಜ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕುವ ಮೂಲಕ ಉದ್ದಟತನವನ್ನು ಪ್ರದರ್ಶನ ಮಾಡಿವೆ.
ಜತ್ತ ತಾಲೂಕಿನ ಹಳ್ಳಿಗರು ಕರ್ನಾಟಕಕ್ಕೆ ಸೇರ್ಪಡೆಯಾಗಬೇಕು ಎಂದು ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅವರಿಗೆ ಇಷ್ಟವಿದ್ದರೆ ಕರ್ನಾಟಕಕ್ಕೆ ಸೇರ್ಪಡೆಯಾಗಲಿ ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೊಮ್ಮಾಯಿ ವಿರುದ್ಧ ಆಕ್ರೋಶ ಹೊರಹಾಕಿದರು.