Ad imageAd image

ಧ್ವಜಾರೋಹಣದ ಮೂಲಕ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ratnakar
ಧ್ವಜಾರೋಹಣದ ಮೂಲಕ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
WhatsApp Group Join Now
Telegram Group Join Now

ಮಂಡ್ಯ: ಶುಕ್ರವಾರದಿಂದ ಮೂರು ದಿನಗಳ ಕಾಲ ಮಂಡ್ಯದ  ಸ್ಯಾಂಜೋ ಆಸ್ಪತ್ರೆ ಹಿಂಭಾಗ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ಅದ್ಧೂರಿ ಚಾಲನೆ ದೊರತಿದೆ.

ರಾಷ್ಟ್ರ ಧ್ವಜ, ನಾಡ ಧ್ವಜ ಹಾಗೂ ಪರಿಷತ್ತಿನ ಧ್ವಜಗಳ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಗಿದೆ. ಸಮ್ಮೇಳನದ ಪ್ರಧಾನ ವೇದಿಕೆ ಮುಖ್ಯದ್ವಾರದ ಮುಂಭಾಗ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದೆ. ಸಚಿವ ಚಲುವರಾಯಸ್ವಾಮಿ  ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದು, ಕ.ಸಾ.ಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ  ನಾಡ ಧ್ವಜಾರೋಹಣ ಮಾಡಿದರು. ಸಂಚಾಲಕಿ ಡಾ. ಮೀರಾ ಶಿವಲಿಂಗಯ್ಯ ಪರಿಷತ್ತು ಧ್ವಜ ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧ್ವಜಾರೋಹಣದ ವೇಳೆ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಡಿಸಿ ಡಾ.ಕುಮಾರ್, ಸಿಇಓ ಶೇಕ್ ತನ್ವೀರ್ ಆಸೀಫ್, ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಉಪಸ್ಥಿತರಿದ್ದರು.

ಇಂದಿನಿಂದ ಮೂರು ದಿನ ಮಂಡ್ಯದಲ್ಲಿ ನುಡಿಹಬ್ಬದ ಕಲರವ ನಡೆಯಲಿದ್ದು, ಸಕ್ಕರೆ ನಗರಿ ಸಂಪೂರ್ಣ ಸಜ್ಜಾಗಿದೆ. ಮೂರು ದಶಕಗಳ ಬಳಿಕ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, 80 ಎಕರೆ ಪ್ರದೇಶದಲ್ಲಿ ಪ್ರಧಾನ ವೇದಿಕೆ ಹಾಗೂ ಎರಡು ಸಮಾನಂತರ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಕೆಆರ್‌ಎಸ್ ಡ್ಯಾಂ ಮಾದರಿಯಲ್ಲಿ ಪ್ರಧಾನ ವೇದಿಕೆ ನಿರ್ಮಾಣಗೊಂಡಿದೆ. ವೇದಿಕೆ ಸೇರಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕನ್ನಡ ಬಾವುಟ ರಾರಾಜಿಸುತ್ತಿದೆ. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದ್ದು, 11 ಗಂಟೆಯ ವೇಳೆಗೆ ಸಿಎಂ ಸಿದ್ದರಾಮಯ್ಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿಕೆಶಿ, ಉಸ್ತುವಾರಿ ಸಚಿವ ಸೇರಿ ಸಚಿವರು, ಶಾಸಕರು, ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 2 ಗಂಟೆಯಿಂದ ಗೋಷ್ಠಿಗಳು ಆರಂಭಗೊಳ್ಳಲಿದೆ. ಸಂಜೆ 7:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಂದು ಸಾಧುಕೋಕಿಲ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯಾಸಕ್ತರಿಗಾಗಿ 450 ಪುಸ್ತಕ ಮಳಿಗೆಗಳು ನಿರ್ಮಾಣಗೊಂಡಿದ್ದು, 350ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ನಿರ್ಮಾಣ ಮಾಡಲಾಗಿದೆ.

WhatsApp Group Join Now
Telegram Group Join Now
Share This Article