ಬೆಂಗಳೂರು: ಯಾವುದೇ ವಾಹನಗಳ ನೋಂದಣಿ ಫಲಕಗಳ ಮೇಲೆ ನಿಯಮಬಾಹಿರವಾಗಿ ಸಂಘ, ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನವನ್ನು ರಾಜ್ಯ ಸರ್ಕಾರ ತೆರವುಗೊಳಿಸುವಂತ ಗೆಜೆಟ್ ಅಧಿಸೂಚನೆಯಲ್ಲಿ ಖಡಕ್ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು, ಕರ್ನಾಟಕ ರಾಜ್ಯಪತ್ರದಲ್ಲಿ ಸುತ್ತೋಲೆ ಹೊರಡಿಸಿದ್ದು, ವಾಹನಗಳ ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮದ ಮಾನದಂಡಗಳಿಗೆ ಅನುಗುಣವಾಗಿ ಹಾಕಿಸಬೇಕು ಎಂದು ತಿಳಿಸಿದ್ದಾರೆ.
ಖಾಸಗಿ ವಾಹನಗಳು ಸರ್ಕಾರದ ಲಾಂಛನ ಮತ್ತು ಹೆಸರುಗಳನ್ನು ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಅಳವಡಿಸಬೇಕಾದಲ್ಲಿ, ಕೇಂದ್ರ ಸರ್ಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳುವುದು ಅವಶ್ಯಕವಾಗಿರುತ್ತದೆ ಎಂದಿದ್ದಾರೆ.
ಇನ್ನು ಈ ಕುರಿತು ಕೋರ್ಟ್ ಆದೇಶ ಕೂಡ ಇದ್ದು, ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ತೆಗೆದುಕೊಂಡು, ಅಧಿಕಾರಿಗಳು ತ್ವರಿತವಾಗಿ ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಮಾಹಿತಿ ರೂಪದಲ್ಲಿ ನೀಡಲು ತಿಳಿಸಿದ್ದಾರೆ.