ಬೀದರ್: ಒಂದು ಏಜೆನ್ಸಿ ಮೊತ್ತೊಂದು ಏಜೆನ್ಸಿಗಳ ನಡುವೆ ಪಕ್ಷಗಳ ಸೀಟು ಗಳಿಸುವ ಅಂತರ ದೊಡ್ಡದಿದೆ ಹೀಗಾಗಿ ಇಂತಹ ಎಕ್ಸಿಟ್ ಪೋಲ್ ಗಳ ಬಗ್ಗೆ ನನಗೆ ಸಂಪೂರ್ಣವಾದ ನಂಬಿಕೆ ಇಲ್ಲ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಹೇಳಿದ್ದಾರೆ.
ಬೀದರ್ ನಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಸ್ಪಷ್ಟವಾಗಿ ಬಿಜೆಪಿ ಪೂರ್ಣ ಬಹುಮತದ ಸರ್ಕಾರ ಬರುತ್ತೆ. ಯಾಕೆಂದರೆ ಕರ್ನಾಟಕದ ಮತದಾರರು ಬಿಜೆಪಿಗೆ ಆರ್ಶೀವಾದ ಮಾಡಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
ನಾನು ಅನೇಕ ಎಕ್ಸಿಟ್ ಪೋಲ್‍ಗಳು ನೋಡಿದ್ದೇನೆ. 2014 ಹಾಗೂ 2019 ರಲ್ಲಿ ನಾನು ಸೋಲುತ್ತೆನೆ ಎಂದು ಎಕ್ಸಿಟ್ ಪೋಲ್ ಬಂದಿತ್ತು. ಆದರೆ ನಾನು ಗೆಲುವು ಸಾಧಿಸಿದ್ದೆ ಎಂದರು. ರಾಜ್ಯದಲ್ಲಿ ಪ್ರಧಾನಿ ಮಂತ್ರಿಗಳ, ಅಮಿತ್ ಶಾ, ನಡ್ಡಾ ಮಾಡಿದ ರೋಡ್ ಶೋ ಹಾಗೂ ಬಹಿರಂಗ ಸಮಾವೇಶಗಳು ಮತಗಳಾಗಿ ಪರಿವರ್ತನೆಯಾಗಿದೆ ಎಂದರು.
ಕಾಂಗ್ರೆಸ್ ಕೇವಲ ಗ್ಯಾರೆಂಟಿ ಕಾರ್ಡ್ ಮೇಲೆ ಮತ ಕೇಳಿದ್ದು ಗ್ಯಾರಂಟಿ ಕಾರ್ಡ್‍ಗಳು ಜನರ ಮನಸ್ಸಿಗೆ ತಟ್ಟಿಲ್ಲಾ ಜೊತೆಗೆ ಕಾಂಗ್ರೆಸ್‍ನ ತುಷ್ಠೀಕರಣ ರಾಜಕಾರಣವನ್ನು ಪ್ರಬುದ್ಧ ಮತದಾರರು ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ ಎಂದು ಕೈಗೆ ಟಾಂಗ್ ನೀಡಿದರು.
ಜೆಡಿಎಸ್ ಶಕ್ತಿ ಇರೋದೇ ಒಂದು ಭಾಗದಲ್ಲಿ ಮಾತ್ರ, ಜೆಡಿಎಸ್‍ನ ಶಕ್ತಿ ಪ್ರತಿ ಚುನಾವಣೆಯಲ್ಲಿ ಕ್ಷೀಣವಾಗುತ್ತಿದೆ ಹೀಗಾಗಿ ಯಾವುದೇ ಕಾರಣಕ್ಕೂ ಅತಂತ್ರ ಎಂಬ ಪ್ರಶ್ನೆ ಉದ್ಭವವಾಗೋದಿಲ್ಲ. ಎಕ್ಸಿಟ್ ಪೋಲ್ ಗಳು ಏನೇ ಇರಲಿ, ಆದರೆ ರಾಜ್ಯದಲ್ಲಿ ಬಿಜೆಪಿ 125ಕ್ಕೂ ಹೆಚ್ಚು ಸ್ಥಾನ ಗೆದ್ದು ಸರ್ಕಾರ ಮಾಡುತ್ತದೆ ಎಂದು ಖೂಬಾ ಅವರು ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.