ಬೆಂಗಳೂರು: ನನ್ನ ಹೆಸರಿಗೆ ಮಸಿ ಬಳಿಯಲು, ನನ್ನ ವಿರುದ್ದ ಹೊಟ್ಟೆ ಕಿಚ್ಚಿನಿಂದ ವಿಪಕ್ಷಗಳು ಮುಡಾ ಹಗರಣದಲ್ಲಿ ರಾಜಕೀಯ ಮಾಡ್ತಿವೆ ಸಿಎಂ ಸಿದ್ದರಾಮಯ್ಯ ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ ವಿರುದ್ದ ಕಿಡಿಕಾರಿದ್ದಾರೆ.
ವಿಧಾನ ಪರಿಷತ್ ಕಲಾಪ ಪ್ರಾರಂಭವಾದ ಕೂಡಲೇ ವಿಪಕ್ಷಗಳು ಸದನದ ಬಾವಿಗಿಳಿದು ಮೂಡಾ ಹಗರಣ ಬಗ್ಗೆ ಚರ್ಚೆಗೆ ಅವಕಾಶ ಕೇಳಿದ್ರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವರು ವಿಷಯವೇ ಇಲ್ಲದ್ದನ್ನ ವಿಷಯ ಮಾಡ್ತಿದ್ದಾರೆ. ಸುಮ್ಮನೆ ಮುಡಾ ವಿಷಯ ಇಟ್ಟುಕೊಂಡು ಪ್ರತಿಭಟನೆ ಮಾಡ್ತಿದ್ದಾರೆ. ನಿಯಮಾವಳಿ ಪ್ರಕಾರವೇ ಸೈಟ್ ಪಡೆಯಲಾಗಿದೆ. ಕಾನೂನು ಪ್ರಕಾರವೇ ಎಲ್ಲಾ ಆಗಿದೆ. ಮುಡಾ ಸೈಟ್ ಕೊಟ್ಟಾಗ ಬಿಜೆಪಿಯೇ ಅಧಿಕಾರದಲ್ಲಿ ಇತ್ತು. ಅದರೂ ಈಗ ಪ್ರತಿಭಟನೆ ಮಾಡಿಸ್ತಿದ್ದಾರೆ ಅಂತ ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಮುಡಾ ಕೇಸ್ ತನಿಖೆಗೆ ನಿವೃತ್ತಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ತನಿಖೆ ಮಾಡೋವಾಗ ಚರ್ಚೆ ಮಾಡೋದು ಸರಿಯಲ್ಲ ಅಂತ ಸಭಾಪತಿ ರೂಲಿಂಗ್ ಅನ್ನ ಸಮರ್ಥನೆ ಮಾಡಿಕೊಂಡರು. ಸೈಟ್ ತೆಗೆದುಕೊಂಡಿರೋದ್ರಲ್ಲಿ ನನ್ನ ತಪ್ಪಿಲ್ಲ. 50:50 ನಿಯಮ ಮಾಡಿದ್ದು ಬಿಜೆಪಿ ಅವಧಿಯಲ್ಲಿ. ನಮ್ಮ ಜಮೀನಿಗೆ ಪರ್ಯಾಯವಾಗಿ ನಾವು ಸೈಟ್ ಕೇಳಿದಾಗ ಮೂಡಾ ಸೈಟ್ ಕೊಟ್ಟಿದೆ. ನಾವು ಇದೇ ಜಾಗ ಕೊಡಿ ಅಂತ ನಾವು ಕೇಳಿರಲಿಲ್ಲ. ಅವರು ಕೊಟ್ಟರು, ನಾವು ತಗೊಂಡ್ವಿ ಅಂತ ತಿಳಿಸಿದರು.