ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಮತದಾನ ಪೂರ್ಣಗೊಳ್ಳುವ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕೆಂಭಾವಿ ಮತ್ತು ಸುರಪುರ ಪಟ್ಟಣಗಳಲ್ಲಿ 2 ದಿನಗಳ ಕಾಲ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಮೇ 10ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿತ್ತು. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆ ಕೆಂಭಾವಿ (ಮತ್ತು ಸುರಪುರ ಪಟ್ಟಣಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಈ ಗಲಾಟೆಯಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪರಿಸ್ಥಿತಿಯನ್ನು ಅವಲೋಕಿಸಿ 2 ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಿ ಆದೇಶಿಸಿದ್ದಾರೆ. ಮೇ 10ರ ಸಂಜೆ 6 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಎರಡು ದಿನಗಳ ಕಾಲ ಪಟ್ರೋಲಿಂಗ್ ಮತ್ತು ಗಸ್ತು ಪಡೆ ಇಲ್ಲೇ ಠಿಕಾಣಿ ಹೂಡಲಿದೆ.
ನಿಷೇಧಾಜ್ಞೆ ಜಾರಿಯಿಂದಾಗಿ ಎರಡೂ ಪಟ್ಟಣಗಳಲ್ಲಿ 5ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಎಲ್ಲರೂ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಖಡಕ್ ಸಂದೇಶ ರವಾನಿಸಿದ್ದಾರೆ.