ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ರಾಜ್ಯದ ಹೊಸ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ಅನುದಾನ ಕೊರತೆ ತಲೆದೋರಿದೆ 26,954 ಕೋಟಿ GST ಕೊರೆತೆಯಾಗಿದ್ದು, ಆರ್ಥಿಕ ಪರಿಸ್ಥಿತಿಗೆ ಇದು ಬಹುದೊಡ್ಡ ಆಘಾತ ಉಂಟು ಮಾಡಿದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಸರ್‌ಚಾರ್ಜ್ ರಾಜ್ಯಗಳಿಗೆ ಹಂಚಿಕೆ ಮಾಡದೆ ತನ್ನ ಬಳಿಯೇ ಉಳಿಸಿಕೊಳ್ಳುತ್ತದೆ. ತೆರಿಗೆಗಳ ಮೇಲೆ ವಿಧಿಸುವ ಸೆಸ್ ಮತ್ತು ಸರ್ ಚಾರ್ಜ್ ಹೆಚ್ಚುತ್ತಿರುವುದರಿಂದ ರಾಜ್ಯಗಳಿಗೆ ಸಂದಾಯವಾಗುವ ತೆರಿಗೆ ಪಾಲು ಕಡಿಮೆಯಾಗಿರುತ್ತದೆ. 2022-23ರಲ್ಲಿ ಎಲ್ಲಾ ರಾಜ್ಯಗಳಿಂದ ಒಟ್ಟು 5,20,570 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರವು ಸೆಸ್ ಮತ್ತು ಸರ್‌ಚಾರ್ಜ್ ಮೂಲಕ ಸಂಗ್ರಹಿಸಿರುವುದರಿಂದ ನಮ್ಮ ರಾಜ್ಯಕ್ಕೆ ಸುಮಾರು 7,780 ಕೋಟಿ ರೂ.ಗಳಷ್ಟು ನಷ್ಟವಾಗಿರುತ್ತದೆ. ನಮ್ಮ ಸರ್ಕಾರವು ಕೇಂದ್ರದ ಈ ನಡೆಯನ್ನು ಬಲವಾಗಿ ವಿರೋಧಿಸುತ್ತದೆ.
ಕೇಂದ್ರ ಸರ್ಕಾರವು, ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯಗಳಿಗೆ ನೀಡುವ ಅನುದಾನವನ್ನು ಕಡಿಮೆ ಮಾಡುತ್ತಾ ಬಂದಿದೆ. ಕೇಂದ್ರದ ಪಾಲು ಕಡಿಮೆಯಾಗಿರುವುದರಿಂದ ರಾಜ್ಯದ ಜನರ ಹಿತದೃಷ್ಟಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲನ್ನು ಹೆಚ್ಚಿಸುವ ಅನಿವಾರ್ಯತೆ ಉಂಟಾಗಿದೆ ಹಾಗೂ ಇದರಿಂದಾಗಿ ರಾಜ್ಯದ ಹೊಸ ಯೋಜನೆಗಳಿಗೆ ಅನುದಾನದ ತೀವ್ರ ಕೊರತೆ ತಲೆದೋರಿದೆ.
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯದ 14.13 ಲಕ್ಷ ಫಲಾನುಭವಿಗಳಿಗೆ ಮಾತ್ರ ಪಿಂಚಣಿಯನ್ನು ನೀಡುತ್ತಿದ್ದು, ರಾಜ್ಯ ಸರ್ಕಾರವು ತನ್ನ ಸ್ವಂತ ಸಂಪನ್ಮೂಲಗಳಿಂದ ಹೆಚ್ಚುವರಿ 64.21 ಲಕ್ಷ ಫಲಾನುಭವಿಗಳಿಗೆ ಪಿಂಚಣಿಯನ್ನು ನೀಡುತ್ತಿದೆ. 2022-23 ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೇವಲ 447 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರವು 8,636 ಕೋಟಿ ರೂ.ಗಳನ್ನು ನೀಡಿರುತ್ತದೆ. ಅಂದ್ರೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೇವಲ ಶೇ.4.9 ರಷ್ಟು ಅನುದಾನ ನೀಡಿದರೆ ಬಾಕಿ ಶೇ.95.1 ರಷ್ಟು ಅನುದಾನವನ್ನ ರಾಜ್ಯ ಸರ್ಕಾರವೇ ನೀಡುತ್ತಿದೆ.