ಬೆಂಗಳೂರು: ಏಳನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳು ಮತ್ತು ಪಿಂಚಣಿಯನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸಲು ಬುಧವಾರ ಆದೇಶಿಸಲಾಗಿದೆ.
ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳ ಪ್ರಕಾರ 2024ರ ಅವಕಾಶಗಳಂತೆ ಪರಿಷ್ಕೃತ ವೇತನ ಶ್ರೇಣಿಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಲು ಆದೇಶ ಹೊರಡಿಸಿದ್ದು ಅದರಂತೆ, 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿ ಸರ್ಕಾರಿ ನೌಕರರ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳನ್ನು ಪರಿಷ್ಕರಿಸಿ ಈ ಕೆಳಕಂಡಂತೆ ಆದೇಶಗಳನ್ನು ಹೊರಡಿಸಲು ಸರ್ಕಾರ ಸೂಚಿಸಿದೆ.
ಕನಿಷ್ಠ ನಿವೃತ್ತಿ ವೇತನ: ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ಮತ್ತು ಕರ್ನಾಟಕ ನಾಗರೀಕ ಸೇವಾ (ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು, 2003ರ ಅವಕಾಶಗಳನ್ನಯ ಸಂದರ್ಭಾನುಸಾರ ಲಭ್ಯವಿರುವ ವಿವಿಧ ರೀತಿಯ ನಿವೃತ್ತಿ ವೇತನಗಳ ಕನಿಷ್ಠ ಮೊತ್ತವನ್ನು ಪ್ರಸ್ತುತ ರೂ. 8,500/- ಗಳಿಂದ ರೂ.13,500/-ಗಳಿಗೆ ಪರಿಷ್ಕರಿಸಲಾಗಿದೆ.
ತುಟ್ಟಿ ಭತ್ಯೆ: 41 ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ) 361.704 ಅಂಶಗಳವರೆಗಿನ (ಆಧಾರ ವರ್ಷ 2001=100) ತುಟ್ಟಿ ಭತ್ಯೆಯನ್ನು 1ನೇ ಜುಲೈ 2022 ರಂದು ಲಭ್ಯವಿದ್ದ ಪ್ರಸ್ತುತ ಮೂಲ ಪಿಂಚಣಿ/ಕುಟುಂಬ ಪಿಂಚಣಿಯೊಂದಿಗೆ ವಿಲೀನಗೊಳಿಸಿ ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ಪಿಂಚಣಿ/ಕುಟುಂಬ ಪಿಂಚಣಿ ಮೊತ್ರವನ್ನು ನಿರ್ಧರಿಸಲಾಗಿದೆ.
ಹಾಗಾಗಿ ಪರಿಷ್ಕೃತ ನಿವೃತ್ತಿ ವೇತನ, ಕುಟುಂಬ ನಿವ್ಯತ್ತಿ ವೇತನ ಮೇಲಿನ ತುಟ್ಟಿ ಭತ್ಯೆಯ ಮೊದಲನೇ ಕಂತನ್ನು 1ನೇ ಜನವರಿ 2023ರಿಂದ ಲೆಕ್ಕಹಾಕಿ ಮಂಜೂರು ಮಾಡುವುದು. 42 ಕಾರ್ಯನಿರತ ಸರ್ಕಾರಿ ನೌಕರರಿಗೆ ಕಾಲ ಕಾಲಕ್ಕೆ ಮಂಜೂರು ಮಾಡುವ ತುಟ್ಟಿ ಭತ್ಯೆ ಆದೇಶಗಳನ್ನು ಅನ್ವಯಿಸಿ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿ ಭತ್ಯೆಯನ್ನು ಕ್ರಮಬದ್ಧಗೊಳಿಸಿ ಮಂಜೂರು ಮಾಡುವುದನ್ನು ಮುಂದುವರೆಸುವುದು. ಅದರಂತೆ, ಪರಿಷ್ಕೃತ ನಿವೃತ್ತಿ ವೇತನ, ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೇಲೆ ತುಟ್ಟಿ ಭತ್ಯೆಯನ್ನು ಕ್ರಮಬದ್ಧಗೊಳಿಸುವುದು.