ವರದಿ: ಪರಮೇಶ.ಡಿ.ವಿಳಸಪೂರೆ
ಔರಾದ: ತಾಪಂ ಕಚೇರಿಯಲ್ಲಿ ಸ್ಥಳಿಯ ತಾಪಂ ಹಾಗು ರಿಲಯನ್ಸ್ ಫೌಂಡೇಷನ್ ಬೀದರ್ ಸಹಯೋಗದಲ್ಲಿ ನೀರಿನ ಅಂತರ್ಜಲ ಮಟ್ಟ ಹೆಚ್ಚಳದ ಕುರಿತು ಚರ್ಚೆ ನಡೆಯಿತು. ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು ಮುಂದಾಗಿರುವ ಗ್ರಾಮ ಪಂಚಾಯಿತಿ ಹಾಗು ತಾಪಂ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆರೆ, ತೊರೆಗಳು ಸೇರಿದಂತೆ ಇತರೆ ಜಲಮೂಲಗಳ ಪುನಶ್ಚೇತನಕ್ಕೆ ಮುಂದಾಗಿದೆ.
ಪಂಚಾಯತಿ ವ್ಯಾಪ್ತಿಯಲ್ಲಿ ಹರಿಯುವ ಎಲ್ಲಾ ಜಲಮೂಲಗಳನ್ನು ಸಂರಕ್ಷಿಸುವ ಜೊತೆಗೆ ಹೂಳೆತ್ತಿಸುವ ಕೆಲಸಕ್ಕೆ ಮುಂದಾಗಿದೆ ರೈತರು ಪ್ರಸ್ತೂತವಾಗಿ ಕೊಳವೆ ಬಾವಿಗಳ ಬದಲಾಗಿ ತೆರೆದ ಬಾವಿಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ತಾಪಂ ಇಒ ಬಿರೇಂದ್ರ ಸಿಂಗ್ ಠಾಕೂರ್ ತಿಳಿಸಿದರು.
ತಾಪಂ ಕಚೇರಿಯಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ಸಹಯೋಗದಲ್ಲಿ ನೀರಿನ ಅಂತರ್ಜಲ ಮಟ್ಟ ಹೆಚ್ಚಳದ ಕುರಿತು ಜರುಗಿದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಸಿಗೆ ಸಮಯದಲ್ಲಿ ಕೊಳವೆ ಬಾವಿ ಕೊರೆಸಿಕೊಳ್ಳಲು ಅನುಮತಿಗಾಗಿ ಗ್ರಾಮ ಪಂಚಾಯಿತಿಗೆ ಬರುವ ಜನರಿಗೆ ನರೇಗಾ ಯೋಜನೆಯಡಿ ಇರುವ ಸೌಲಭ್ಯಗಳನ್ನು ತಿಳಿಸಿ ತೆರೆದ ಬಾವಿಗಳನ್ನು ನಿರ್ಮಿಸುವಂತೆ ಮನವೊಲಿಸುವ ಕೆಲಸ ಆರಂಭಿಸಲಾಗಿದೆ. ಕೂಡಲೇ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಹಳ್ಳಿಯ ಸಾರ್ವಜನಿಕರು ತೆರೆದ ಬಾವಿಯ ಬಗ್ಗೆ ಅನುಮೋದನೆ ಪಡೆದು ಶೀಘ್ರವೇ ತೆರೆದ ಬಾವಿಗಳನ್ನು ನಿರ್ಮಿಸಿಕೊಂಡು ಅರೇ ಭೂಮಿಯಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯ ಪಡೆಯಲು ಗ್ರಾಪಂ ಹಾಗು ತಾಪಂ ಉತ್ತಮ ಯೋಜನೆ ನೀಡುತ್ತಿದೆ.
ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರು ಕೊಳವೆ ಬಾವಿಗಳ ಅವಲಂಬನೆಯನ್ನು ಬಿಟ್ಟುಕೊಟ್ಟು ತೆರೆದ ಬಾವಿಯತ್ತಾ ಗಮನಹರಿಸಿ ಭೂಮಿಯಲ್ಲಿನ ಅಂತರ್ಜಲ ಮಟ್ಟ ಹೆಚ್ಚಿಸಲು ಶ್ರಮಿಸಬೇಕಾಗಿದೆ ಎಂದರು.
ರಿಲಯನ್ಸ್ ಫೌಂಡೇಷನ್ ಸಹಾಯಕ ಯೋಜನಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ೨೦೧೪ರಿಂದ ರೈತರ ಸಮಗ್ರ ಏಳಿಗೆಗೆಗಾಗಿ ಫೌಂಡೇಷನ್ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಸ್ಥಳಿಯ ಸರಕಾರ, ಕಚೇರಿಗಳ ಉನ್ನತ ಅಧಿಕಾರಿಗಳ ಸಭೆ ನಡೆಸಿ ಪ್ರತಿಯೊಂದು ವಿಷಯಗಳ ಮೇಲೆ ಅಧ್ಯಯನ ಮಾಡಿ, ರೈತರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದರು.
ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಮಾಳಿ, ಮಲ್ಲಪ್ಪ ಗೌಡಾ ಇದ್ದರು.