ಬೆಳಗಾವಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.
ಇದೀಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುವ ಬಡಸ ಕೆ.ಹೆಚ್ ಗ್ರಾಮದಲ್ಲಿ ಶಿವಾಜಿ ಮಹಾರಾಜ ಯುವಕ ಮಂಡಳಿಯನ್ನು ಉದ್ಘಾಟನೆ ಮಾಡುವ ಮೂಲಕ ಮರಾಠ ಮತಗಳನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ರಮೇಶ್ ಜಾರಕಿಹೊಳಿ ರಾಜಕೀಯ ಬದ್ಧವೈರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಅಖಾಡಕ್ಕೆ ಇಳಿದಿದ್ದು, ಮರಾಠ ಸಮುದಾಯದ ಓಲೈಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ. ಕಳೆದೊಂದು ವಾರದಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ರಮೇಶ್ ಜಾರಕಿಹೊಳಿ ಭಾಗಿಯಾಗುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಆಪ್ತ ನಾಗೇಶ್ ಮನ್ನೋಳಕರನ್ನು ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರಿಗೆ ಭೇಟಿ ಮಾಡಿಸಿದ್ದರು. ಚುನಾವಣೆಯ ರಣತಂತ್ರವನ್ನು ರಮೇಶ್ ಜಾರಕಿಹೊಳಿ ರೂಪಿಸುತ್ತಿದ್ದಾರೆ ಎಂಬ ಮಾತುಗಳು ದಟ್ಟವಾಗಿವೆ.