ಬೆಳಗಾವಿ: ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಕಾಂಗ್ರೆಸ್ ಕಚೇರಿ ನಿರ್ಮಾಣ ಕ್ರೆಡಿಟ್ ಕಾಳಗಕ್ಕೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಎಂಟ್ರಿ ಆಗಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನಾನು 1.27 ಕೋಟಿ ರೂ. ನೀಡಿದ್ದೇನೆ. ನಾನು ಉಸ್ತುವಾರಿ ಮಂತ್ರಿ ಆಗಿದ್ದಾಗ ಶಿವಕುಮಾರನನ್ನು ಬೆಳಗಾವಿಗೆ ಬರಲು ಬಿಟ್ಟಿರಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಡಿಕೆಗೆ ಮತ್ತೊಮ್ಮೆ ಠಕ್ಕರ್ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಿಎಲ್ಪಿ ಸಭೆಯಲ್ಲಿ ಡಿಕೆ ಶಿವಕುಮಾರ್ ರಾಜ್ಯದ ಜನರಿಗೆ ತಪ್ಪು ಸಂದೇಶ ಕೊಟ್ಟಿದ್ದಾರೆ. ಈ ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಆಗಿದ್ದರಿಂದ ನಾನು ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ನಾನು ಕಾಂಗ್ರೆಸ್ ಪಕ್ಷದ ಶಾಸಕನಾಗಿದ್ದಾಗ ಪರಮೇಶ್ವರ್ ಅಧ್ಯಕ್ಷರಾಗಿದ್ದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ಆಗಲು ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಎಂದು ಡಿಕೆಶಿ ಹೇಳಿದ್ದಾರೆ. 2013-18ರ ವರೆಗೆ ಕಾಂಗ್ರೆಸ್ ಪಕ್ಷದ ಕಚೇರಿ ಆಗಿದ್ದರ ಬಗ್ಗೆ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹೆಬ್ಬಾಳ್ಕರ್ ಜಿಲ್ಲಾಧ್ಯಕ್ಷೆ ಆಗಿದ್ದರೆ ಅಂದು ಕಟ್ಟಡ ನಿರ್ವಹಣೆ ಸಮಿತಿಯ ಅಧ್ಯಕ್ಷರಾಗಿ ಮಹಾದೇವಪ್ಪ ಇದ್ದರು. ಆಗ ನಾನು ಶಾಸಕನಾಗಿದ್ದೆ, ಹೆಬ್ಬಾಳ್ಕರ್ ನಾವು ಒಂದು ತಂಡವಾಗಿ ಕೆಲಸ ಮಾಡ್ತಿದ್ದೆವು.
ಆರ್ಟಿಒ ವೃತ್ತದ ಬಳಿ ಶಂಕ್ರಾನಂದ ಅವರ ಹೆಸರಿನಲ್ಲಿ ಜಾಗ ಇತ್ತು. ಅವರ ಮಕ್ಕಳಿಗೆ ಜಾಗ ನೀಡುವಂತೆ ಮನವೊಲಿಸಿ ಬಳಿಕ ಕ್ಯಾಬಿನೆಟ್ಗೆ ತಂದು ಆ ಜಾಗ ಮಂಜೂರು ಮಾಡಿಸಿದ್ದೆ. ನಾನು 54 ಲಕ್ಷ ರೂ. ಜಾಗಕ್ಕೆ ಹಣ ನೀಡಿ ಖರೀದಿ ಪ್ರಕ್ರಿಯೆ ಮಾಡಿಸಿದ್ದೆವು. ಎರಡು ಭಾಗದಲ್ಲಿ ಹಣವನ್ನ ಮಾಲೀಕರಿಗೆ ನೀಡಿದ್ದೆವು. ನಾನೇ ಸ್ವಂತ 27ಲಕ್ಷ ಹಣವನ್ನ ಮೊದಲ ಕಂತಿನಲ್ಲಿ ನೀಡಿದ್ದೆ. ಜಾಗ ಖರೀದಿಯಾದ ಮೇಲೆ ನೆನೆಗುದಿಗೆ ಬಿದ್ದಿತ್ತು.
ನಾನು ಮಂತ್ರಿಯಾದ ಮೇಲೆ ಒಂದು ಕೋಟಿ ರೂ. ಸೇರಿ ಒಟ್ಟು 1.27 ಕೋಟಿ ರೂ. ನೀಡಿದ್ದೇನೆ. ಲಕ್ಷ್ಮೀ ಹೆಬ್ಬಾಳ್ಕರ್ ನಾನು ಮಾಡಿದ್ದೇನೆ ಎಂದು ಹೇಳುತ್ತಿರುವುದು ತಪ್ಪು. ಕಾಂಗ್ರೆಸ್ ಎಲ್ಲ ಶಾಸಕರು ಕೂಡ ಹಣ ಕೊಟ್ಟಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಹಣ ಕೊಟ್ಟಿದ್ದಾರೆ ಗೊತ್ತಿಲ್ಲ. ಮುಂದಿನ ದಿನದಲ್ಲಿ ಕಚೇರಿ ನಿರ್ಮಾಣದ ಕೆಲಸವನ್ನು ಸತೀಶ್ ಜಾರಕಿಹೊಳಿ ಮಾಡಿದ್ದಾರೆ. ಕಚೇರಿ ನಿರ್ಮಾಣದಲ್ಲಿ ಸಾಕಷ್ಟು ಗೋಲ್ಮಾಲ್ ನಡೆದಿದೆ. ಯಾರು ಮಾಡಿದ್ದಾರೆ ಎನ್ನುವುದನ್ನು ಈಗಿನ ಜಿಲ್ಲಾಧ್ಯಕ್ಷ ವಿನಯ್ ಅವರನ್ನು ಕೇಳಿ.