ನವದೆಹಲಿ: ಹರಿಯಾಣದಲ್ಲಿ (Haryana Election) ಆಘಾತಕಾರಿ ಸೋಲು ಅನುಭವಿಸಿದ ಒಂದು ದಿನದ ಬಳಿಕ ಲೋಕಸಭೆ (Lok Sabha ) ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Ganndhi) ಮೌನ ಮುರಿದಿದ್ದಾರೆ.
ಹರಿಯಾಣ ಸೋಲಿನ ಬಗ್ಗೆ ವಿಶ್ಲೇಷಣೆ ನಡೆಸಲಾಗುವುದು ಮತ್ತು ಕೆಲವು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ.
ನಾವು ಹರಿಯಾಣದ ಅನಿರೀಕ್ಷಿತ ಫಲಿತಾಂಶವನ್ನು ವಿಶ್ಲೇಷಿಸುತ್ತಿದ್ದೇವೆ. ಹಲವು ವಿಧಾನಸಭಾ ಕ್ಷೇತ್ರಗಳಿಂದ ಬರುವ ದೂರುಗಳ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ತಿಳಿಸುತ್ತೇವೆ. ಈ ಅವಧಿಯಲ್ಲಿ ಬೆಂಬಲಿಸಿದ ಹರಿಯಾಣದ ಎಲ್ಲಾ ಜನರಿಗೆ ಮತ್ತು ಅವರ ಅವಿರತ ಶ್ರಮಕ್ಕಾಗಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು. ನಾವು ಮುಂದುವರಿಯುತ್ತೇವೆ, ನಿಮ್ಮ ಹಕ್ಕುಗಳಿಗಾಗಿ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ, ಸತ್ಯಕ್ಕಾಗಿ ಮತ್ತು ನಿಮ್ಮ ಪರವಾಗಿ ನಾವು ಧ್ವನಿಯನ್ನು ಎತ್ತುತ್ತಲೇ ಇರುತ್ತೇವೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಫಲಿತಾಂಶವು ಸಂವಿಧಾನದ ಗೆಲುವು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ವಿಜಯವು ಸಂವಿಧಾನದ ವಿಜಯವಾಗಿದೆ, ಪ್ರಜಾಪ್ರಭುತ್ವದ ಸ್ವಾಭಿಮಾನದ ಗೆಲುವಾಗಿದೆ ಎಂದು ಬಣ್ಣಿಸಿದ್ದಾರೆ.