ಬೆಂಗಳೂರು: ಶಿವಕುಮಾರ್ ಅಣ್ಣ ನೀವು ಕೊಟ್ಟಿರೋ ಭರವಸೆ, ಮೋದಿ ಕೊಟ್ಟಿರೋ ಭರವಸೆ ಅಲ್ಲ. ನೀವು ಈಡೇರಿಸಬೇಕು. ಗ್ಯಾರಂಟಿ ಕೊಡಲು ಆಗದೇ ಹೋದರೆ ಅಧಿಕಾರ ಬಿಟ್ಟು ಹೋಗಿ. ಮೋದಿ ಮೇಲೆ ಯಾಕೆ ಆರೋಪ ಮಾಡ್ತೀರಾ ಎಂದು ಮಾಜಿ ಸಚಿವ ಆರ್ ಅಶೋಕ್ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಗ್ಯಾರಂಟಿ ಘೋಷಣೆ ಮಾಡೋವಾಗ ಕೇಂದ್ರ ಸರ್ಕಾರದ ಅನುಮತಿ ಪಡೆದಿದ್ರಾ? ಕೇಂದ್ರವನ್ನು ಕೇಳಿ ಭರವಸೆ ಕೊಟ್ಟಿದ್ದೀರಾ? ನಿಮ್ಮ ಗ್ಯಾರಂಟಿ ಜಾರಿ ಮಾಡೋದು ನಿಮ್ಮ ಕರ್ತವ್ಯ. ಅದಕ್ಕೆ ಮೋದಿ ಮೇಲೆ ಯಾಕೆ ಮಾತಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಅಕ್ಕಿ ಬಗ್ಗೆ ಈಗ ಆರೋಪ ಮಾಡುತ್ತಾರೆ. ಕೇಂದ್ರ ಸರ್ಕಾರ ಅತ್ತೆ ಮನೆ ಅಲ್ಲ. ಸುರ್ಜೆವಾಲ ಮಂತ್ರಿ ಹಾಗೆ ಆಡ್ತಿದ್ದಾರೆ. ಘೋಷಣೆ ಮಾಡೋವಾಗ ಪರಿಜ್ಞಾನ ಇರಲಿಲ್ಲವಾ? ಮಾತು ಕೊಡೋವಾಗ ನೀವು ಕೇಂದ್ರ ಸರ್ಕಾರವನ್ನು ಕೇಳಿದ್ರಾ? ನಾವೇನು ಅಕ್ಕಿ ರಾಜಕೀಯ ಮಾಡಲ್ಲ. ಇಡೀ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉಚಿತವಾಗಿ ಅಕ್ಕಿ ಕೊಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಬೇಕು. ಮೋದಿ ಅಕ್ಕಿ ಮೇಲೆ ಸಿದ್ದರಾಮಯ್ಯ ಫೋಟೋ ಹಾಕಿದ್ರು. ಯಾಕೆ ಅವತ್ತು ಅದನ್ನು ಮೋದಿ ಅಕ್ಕಿ ಅಂತ ಹೇಳಿಲ್ಲ? ಈಗ ಕೇಂದ್ರದ ಮೇಲೆ ಹಾಕ್ತೀರಾ? ಹೀಗೆ ಆದ್ರೆ ಒಂದು ವರ್ಷದಲ್ಲಿ ರಾಜ್ಯ ದಿವಾಳಿ ಆಗುತ್ತೆ ಬರೆದಿಟ್ಟುಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡುವುದಾಗಿ ಡಿಕೆಶಿ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪ್ರತಿಭಟನೆ ಮಾಡಲಿ. ಅವರಿಗೆ ಶಾಮಿಯಾನ ಕಡಿಮೆ ಆದರೆ ನಾವೇ ಹಾಕಿಸಿಕೊಡುತ್ತೇವೆ. ಡಿಕೆಶಿಗೆ ದಮ್ಮು ತಾಕತ್ತು ಇದ್ದರೆ ಮೊದಲು ಷರತ್ತು ಇಲ್ಲದೆ 5 ಗ್ಯಾರಂಟಿ ಜಾರಿ ಮಾಡಲಿ. ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಮೊದಲು ಕಂಡಿಷನ್ ಇಲ್ಲದೆ ಜಾರಿ ಮಾಡಲಿ. ಮೊದಲು ನಿಮ್ಮ ದಮ್ಮು, ತಾಕತ್ತು ಉಚಿತ, ಖಚಿತ, ನಿಶ್ಚಿತ ಕೊಟ್ಟು ತೋರಿಸಲಿ. ಆಮೇಲೆ ನಾವು ಮಾತನಾಡುತ್ತೇವೆ ಎಂದು ಹೇಳಿಕೆ ನೀಡಿದರು.