ಬೆಳಗಾವಿ ನಾಗರಿಕರ ವಾರ್ಡ್ ಸಮಿತಿ ಬಳಗದ ವತಿಯಿಂದ ಸಂವಿಧಾನಾತ್ಮಕವಾಗಿ, ಶಾಸನಾತ್ಮಕವಾಗಿ ಮತ್ತು ಕಡ್ಡಾಯವಾಗಿ ಬೆಳಗಾವಿ ಮಹಾನಗರ ಪಾಲಿಕೆಯಿಂದ ರಚಿಸಲೇ ಬೇಕಾಗಿರುವ ನಾಗರಿಕರ ವಾರ್ಡ್ ಸಮಿತಿ ಕಾನೂನಿನ ಕುರಿತು ವಾರ್ಡ್ ನಂಬರ್ 48ರ ದೇವರಾಜ್ ಅರಸ್ ಕಾಲೋನಿಯ ಬಸವಣ ಕುಡಚಿ ಪ್ರದೇಶದ ನಾಗರಿಕರಿಗಾಗಿ ಜನಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕಳೆದ ಎರಡು ವರ್ಷಗಳಿಂದ ಸತತವಾಗಿ ಬೆಳಗಾವಿ ಮಹಾನಗರದ ಅನೇಕ ವಾರ್ಡ ಗಳಲ್ಲಿ, ಭಾರತದ ಸಂವಿಧಾನದ 74ನೇ ತಿದ್ದುಪಡಿಯ ಪ್ರಕಾರ, ಸ್ಥಳೀಯ ಆಡಳಿತದಲ್ಲಿ ನಾಗರಿಕರು ಪಾಲ್ಗೊಳ್ಳಲು ಅವಕಾಶ ನೀಡುವ ಕಾನೂನಿನ ಅನ್ವಯ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯು ಕೆಎಂಸಿ ಕಾಯ್ದೆ ಸೆಕ್ಷನ್ 13 (ಏಚ್) ರ ಪ್ರಕಾರ, ಶಾಸನಾತ್ಮಕವಾಗಿ ಕಡ್ಡಾಯವಾದ ನಾಗರಿಕರ ವಾರ್ಡ್ ಸಮಿತಿ ರಚಿಸಲೇ ಬೇಕಾಗಿರುವ ಕಾನೂನು ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬರಲಾಗುತ್ತಿದ್ದು ಈ ಅಭಿಯಾನದ ಮುಂದುವರಿದ ಭಾಗವಾಗಿ ಇಂದು ಬೆಳಗಾವಿ ಮಹಾನಗರದ ವಾರ್ಡ್ ನಂಬರ್ 48ರ ದೇವರಾಜ್ ಅರಸ್ ಕಾಲೋನಿಯ ಬಸವನ ಕುಡುಚಿ ಪ್ರದೇಶದ ನಾಗರಿಕರಿಗಾಗಿ ಬೆಳಗಾವಿ ನಾಗರಿಕರ ವಾರ್ಡ್ ಸಮಿತಿ ಬಳಗದ ಸಹ- ಸಂಚಾಲಕರುಗಳಾದ ಮಲ್ಲಪ್ಪ (ಪ್ರೇಮ್) ಚೌಗುಲಾ ಹಾಗೂ ಅನಿಲ್ ಚೌಗುಲಾ ರವರು ವಿಸ್ತೃತವಾದ ಮಾಹಿತಿಯನ್ನು ಹಂಚಿಕೊಂಡರು. ನಾಗರಿಕರ ವಾರ್ಡ್ ಸಮಿತಿ ಕಾನೂನಿನ ಕುರಿತು ಪ್ರದೇಶದ ನಾಗರಿಕರು ಕೇಳಿದ ಹಲವಾರು ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡಿದರು.
ಬೆಳಗಾವಿ ಮಹಾನಗರದ ಪ್ರತಿಯೊಂದು ವಾರ್ಡ್ ನಿಂದ ಸ್ವಯಂ ಪ್ರೇರಿತವಾಗಿ ನಾಗರಿಕರು, ಬೆಳಗಾವಿ ನಾಗರಿಕರ ವಾರ್ಡ್ ಸಮಿತಿ ಸಂಪರ್ಕಿಸುವ ಮೂಲಕ ತಮ್ಮ ವಾರ್ಡಿನ ನಾಗರಿಕರಿಗೂ ಸಹ ಈ ರೀತಿಯ ಶಾಸನಾತ್ಮಕವಾಗಿ ಕಡ್ಡಾಯವಾದ ನಾಗರಿಕರ ವಾರ್ಡ್ ಸಮಿತಿ ಕಾನೂನಿನ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲು ಮುಂದೆ ಬರಬೇಕೆಂದು ಕರೆ ನೀಡಿದರು. ರಾಜ್ಯದ ರಾಜಧಾನಿಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಹಾಗೂ ಮಂಗಳೂರು ಮಹಾನಗರ ಪಾಲಿಕೆಯಿಂದ ಈಗಾಗಲೇ ಅಸ್ತಿತ್ವದಲ್ಲಿರುವ ನಾಗರಿಕರ ವಾರ್ಡ್ ಸಮಿತಿ ಸಭೆಗಳು ನಿಯಮಿತವಾಗಿ ಮತ್ತು ನಿರಂತರವಾಗಿ ಜರುಗುತ್ತಿದ್ದು, ಆ ನಗರದ ವಾರ್ಡ್ ಗಳ ಪ್ರದೇಶದ ನಾಗರಿಕರ ಮೂಲಭೂತ ಸೌಲಭ್ಯಗಳ ಸಮಸ್ಯೆಗಳನ್ನು ಕುರಿತ ಮತ್ತು ಹೊಸದಾಗಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಫಲಪ್ರದವಾದ ಚರ್ಚೆಗಳು, ಅಲ್ಲಿನ ಕಾರ್ಪೊರೇಟರ್ ಗಳು (ವಾರ್ಡ ಸಮಿತಿ ಅಧ್ಯಕ್ಷರುಗಳು), ಪಾಲಿಕೆ ಅಧಿಕಾರಿಗಳು ಮತ್ತು ವಾರ್ಡ್ ಸಮಿತಿ ಸದಸ್ಯರ ಮಧ್ಯೆ ಪ್ರತಿ ತಿಂಗಳಿನ ವಾರ್ಡ್ ಸಮಿತಿ ಸಭೆಗಳಲ್ಲಿ ವಿಷಯ ಮಂಡನೆಗಳು ನಡೆದು ಸೌಹಾರ್ದಯುತವಾಗಿ ನಿರ್ಣಯಗಳು ಆಗುತ್ತಿವೆ.
ಹಾಗಾಗಿ, ಜನಪರವಾದ ಈ ಕಾನೂನಿನ ಅನುಷ್ಠಾನ ನಮ್ಮ ಬೆಳಗಾವಿ ಮಹಾನಗರದಲ್ಲಿಯೂ ಕೂಡ ಜನರ ಪಾಲ್ಗೊಳ್ಳುವಿಕೆಯಿಂದ ಆಗಬೇಕಾಗಿದೆ ಎಂದು ನುಡಿದರು.
ನಂತರ, ದೇವರಾಜ್ ಅರಸ್ ಕಾಲೋನಿಯಲ್ಲಿರುವ ಶಿವಾಲಯ ಮಂದಿರದ ಆವರಣದಲ್ಲಿ, ಸಭೆಯಲ್ಲಿ ಸೇರಿದ ನಾಗರಿಕರೆಲ್ಲರೂ ಸೇರಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.
ಇಂದು ಜರುಗಿದ ಜನಜಾಗೃತಿ ಸಭೆಯಲ್ಲಿ ಬೆಳಗಾವಿ ವಾರ್ಡ್ ಸಮಿತಿ ಬಳಗದ ಸಹ ಸಂಚಾಲಕರಾದ ಮಲ್ಲಪ್ಪ ಪ್ರೇಮ್ ಚೌಗಲಾ, ಮುರಿಗೆಪ್ಪ ಎಂ. ಬಾಳಿ, ಅನಿಲ್ ಚೌಗಲಾ, ಪ್ರಮೋದ್ ಗುಂಜಿಕರ್, ಅಪ್ಪಣ್ಣ ಹಾಗೂ ಸಿದ್ದಾರ್ಥ್ ಕೆರೂರಕರ್, ಮಹೇಶ್ ಬಿ ಹಿರೇಮಠ್ ಹಾಗೂ ವಾರ್ಡ್ ನಂಬರ್ 48ರ ನಾಗರಿಕರು ಉಪಸ್ಥಿತರಿದ್ದರು.