ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಮೇಲೆ ಅನೇಕ ಬದಲಾವಣೆಯನ್ನು ತರುವ ಮೂಲಕ ಕಂದಾಯ ಇಲಾಖೆಯಲ್ಲಿ ಸುಧಾರಣೆ ತರಲಾಗಿದೆ. ಜನ ಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುವ ಮೂಲಕ ಸ್ಪಂದಿಸಿದ್ದೇವೆ. ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತೆರಳಿ ಮಾಡಿಕೊಡಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮನೆ ಮನೆ ತೆರಳಿ ಖಾತೆ ಮಾಡಬೇಕು ಎಂಬ ಆದೇಶ ಹೊರಡಿಸಿದ್ದಾರೆ. ಹಲವಾರು ದಿನಗಳಿಂದ ಬಾಕಿ ಇದ್ದಂತಹ ಒಟ್ಟು 15,000 ಪ್ರಕರಣಗಳಲ್ಲಿ 13,000 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಕೇವಲ 1 ವಾರದಲ್ಲಿಯೇ 416 ಪ್ರಕರಣಗಳ ಸರ್ವೇ ಮಾಡಲಾಗಿದೆ. ಜೊತೆಗೆ ಪೌತಿ ಖಾತೆಗಳನ್ನು ಸರಿಯಾದ ರೀತಿಯಲ್ಲಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ. 1960- 70 ರಲ್ಲಿ ಮಂಜೂರಾಗಿರುವ ಕಂದಾಯ ಇಲಾಖೆಯ ದರಖಾಸ್ತು ಪೋಡಿ ದುರಸ್ಥಿ ಸರಳೀಕೃತ ಕಾರ್ಯದ ಹೊಸ ಪಹಣೆ ಮತ್ತು ಪೋಡಿ ದಾಖಲೆಗೆ ಸಂಬಂಧಪಟ್ಟಂತೆ ಶಾಶ್ವತ ದಾಖಲೆಗಳನ್ನು ನೀಡಲಾಗುತ್ತಿದೆ ಎಂದರು.
ನಮ್ಮ ಸರ್ಕಾರವು ಜನರ ಮನೆಯ ಬಾಗಿಲಿಗೆ ಅನೇಕ ಯೋಜನೆಗಳನ್ನು ನೀಡುವ ಮೂಲಕ ಅನುಕೂಲ ಮಾಡುತ್ತಿದೆ. ಸರ್ಕಾರದ ಪಂಚಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ, ಅನ್ನ ಭಾಗ್ಯ ಯೋಜನೆಗಳಿಂದ ಸಾರ್ವಜನಿಕರು ಸದುಪಯೋಗ ಪಡೆಯುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ವತಿಯಿಂದ ಡೀಸಲ್ ಎಂಜಿನ್, ಪಿವಿಸಿ ಪೈಪ್, ರಾಗಿ ಫ್ಲೋರ್ಮಿಲ್ ಸೇರಿದಂತೆ 380 ಫಲಾನುಭವಿಗಳಿಗೆ 1ಕೋಟಿ ರೂ ವೆಚ್ಚದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ,ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರು ಮಂಜುನಾಥ್ ಜೆ.ಮೈಸೂರು ವಿಭಾಗ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರು ಈ. ಪ್ರಕಾಶ್, ಜಿಲ್ಲಾಧಿಕಾರಿ ಡಾ ಕುಮಾರ, ಉಪವಿಭಾಗಾಧಿಕಾರಿ ಶಿವಮೂರ್ತಿ, ಶ್ರೀನಿವಾಸ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು