ಬೆಳಗಾವಿ : ನಗರದ ಗೋಗಟೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಬಾವುಟವನ್ನು ಪ್ರದರ್ಶನ ಮಾಡಿದ್ದಕ್ಕೆ ಇತರೆ ಕೆಲ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವುದು ಹಾಗೂ ದೂರು ದಾಖಲಿಸಲು ಹೋದಾಗ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕರವೇ ನಾರಾಯಣ ಗೌಡ ಬಣದಿಂದ ಪ್ರತಿಭಟನೆ ನಡೆದಿದೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಾಥ್ ನೀಡಿದ್ದು, ಹೆದ್ದಾರಿ ತಡೆ ನಡೆಸಿದೆ. ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಹಲ್ಲೆ ಮಾಡಿದ ಸಹಪಾಠಿಗಳ ವಿರುದ್ಧ ಹಾಗೂ ಠಾಣೆಯಲ್ಲಿ ದರ್ಪ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಬೆಳಗಾವಿ-ಗೋವಾ ರಾಜ್ಯ ಹೆದ್ದಾರಿ ತಡೆದು ಕರವೇ ಪ್ರತಿಭಟನೆ ನಡೆಸುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಾಥ ನೀಡಿದೆ. ಬೆಳಗಾವಿಯ ಆರ್‌ಪಿಡಿ ವೃತ್ತದಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವ ಕಾರಣಕ್ಕೆ ಗೋವಾ-ಬೆಳಗಾವಿ ಹೆದ್ದಾರಿಯಲ್ಲಿ ಟ್ರಾಫಿಕ್ ಕಿರಿಕಿರಿ ಉಂಟಾಗಿದೆ.
ಮುಂಜಾಗ್ರತಾ ಕ್ರಮವಾಗಿ ಪ್ರಥಮ, ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಗೋಗಟೆ ಕಾಲೇಜು ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದೆ. ಪಿಯುಸಿ ಹೊರತುಪಡಿಸಿ ಇನ್ನುಳಿದ ತರಗತಿಗಳು ಎಂದಿನಂತೆ ಆರಂಭವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಐಡಿ ಕಾರ್ಡ್ ತಪಾಸಣೆ ನಡೆಸಿ ಸಿಬ್ಬಂದಿ ಒಳಗೆ ಬಿಡುತ್ತಿದ್ದಾರೆ.