ಬೆಳಗಾವಿ : ಕರ್ನಾಟಕ ವಿಧಾನ ಪರಿಷತ್ ಉಪ ಸಭಾಪತಿಯಾಗಿ ಪ್ರಾಣೇಶ್ ಎಂ.ಕೆ. ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಸಭಾಪತಿ ಬಸವರಾಜ ಎಸ್ ಹೊರಟ್ಟಿ ಉಪಸಭಾಪತಿ ಸ್ಥಾನದ ಚುನಾವಣೆ ಪ್ರಸ್ತಾಪವನ್ನು ಸದನದ ಮುಂದೆ ತಂದರು.
ಆಡಳಿತ ಪಕ್ಷದ ಪರಿಷತ್ ಸಭಾ ನಾಯಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸದಸ್ಯರಾದ ಎಸ್.ರುದ್ರೇಗೌಡ, ಡಾ.ತಳವಾರ್ ಸಾಬಣ್ಣ, ಅರುಣ್ ಡಿ.ಎಸ್. ಅವರು ಪ್ರಾಣೇಶ್ ಎಂ.ಕೆ ಅವರನ್ನು ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಚುನಾಯಿಸಲು ಪ್ರಸ್ತಾವನೆಯನ್ನು ಸೂಚಿಸಿದರು.
ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಪ್ರತಾಪ್ ಸಿಂಹ ನಾಯಕ್.ಕೆ, ಹೇಮಲತಾ ನಾಯಕ ಹಾಗೂ ನವೀನ್ .ಕೆ.ಎಸ್. ಪ್ರಸ್ತಾವನೆಯನ್ನು ಅನುಮೋದಿಸಿದರು.
ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಸದಸ್ಯ ಅರವಿಂದ ಕುಮಾರ್ ಅರಳಿಯವರನ್ನು ಉಪಸಭಾಪತಿ ಸ್ಥಾನಕ್ಕೆ ಚುನಾಯಿಸುವ ಪ್ರಸ್ತಾವನೆಯನ್ನು ಮಂಡಿಸಿದರು. ಸದಸ್ಯ ಮಂಜುನಾಥ್ ಭಂಡಾರಿ ಪ್ರಸ್ತಾವನೆಯನ್ನು ಅನುಮೋದಿಸಿದರು.
ಉಪ ಸಭಾಪತಿ ಚುನಾವಣೆಗೆ ಸದಸ್ಯ ಎಂ.ಕೆ.ಪ್ರಾಣೇಶ್ ಪರವಾಗಿ 4 ಪ್ರಸ್ತಾವ ಹಾಗೂ ಅರವಿಂದ ಕುಮಾರ್ ಅರಳಿ ಪರವಾಗಿ 1 ಪ್ರಸ್ತಾವ ಸೇರಿ ಒಟ್ಟು 5 ಪ್ರಸ್ತಾವನೆಗಳು ಮಂಡನೆಯಾದವು.
ಸಭಾಪತಿ ಬಸವರಾಜ ಹೊರಟ್ಟಿ, ಆಡಳಿತ ಪಕ್ಷದ ಪರಿಷತ್ ಸಭಾ ನಾಯಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಮೊದಲ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರು. ಪ್ರಸ್ತಾವನೆಯ ಪರವಾಗಿ ಒಟ್ಟು 39 ಹಾಗೂ ವಿರುದ್ಧವಾಗಿ 26 ಮತಗಳು ಚಲಾವಣೆಯಾದವು.
ಮೊದಲನೆ ಪ್ರಸ್ತಾವನೆಯು 39 ಮತಗಳನ್ನು ಪಡೆಯುವುದರ ಮೂಲಕ ಅಂಗೀಕರವಾದ ಬಳಿಕ, ಪ್ರಾಣೇಶ್ ಎಂ.ಕೆ ಅವರು ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಘೋಷಿಸಿದರು. ಜೆಡಿಎಸ್ ಪಕ್ಷದ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ತಟಸ್ಥವಾಗಿ ಉಳಿದರು.