ಬೆಳಗಾವಿ: ಜೈಲಿನ ಎಲ್ಲಾ ಪ್ರಕಿಯೆ ಮುಗಿಯುತ್ತಿದ್ದಂತೆ ರೇಣುಕಾಸ್ವಾಮಿ ಕೊಲೆ ಆರೋಪಿ ಪ್ರದೂಷ್‌ನನ್ನು ಹಿಂಡಲಗಾ ಜೈಲಿನ ಅತಿ ಭದ್ರತಾ ವಿಭಾಗದಲ್ಲಿ (ಅಂಧೇರಿ ಸೆಲ್) ಇಡಲಾಗುವುದು ಮತ್ತು ಏಳು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು ಎಂದು ಹಿಂಡಲಗಾ ಜೈಲಿನ ಸಹಾಯಕ ಅಧೀಕ್ಷಕ ವಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯದ ಫೋಟೋ ವೈರಲ್ ಆದ ಬಳಿಕ ನಟ ದರ್ಶನ್ ಗ್ಯಾಂಗ್‌ನ 12 ಆರೋಪಿಗಳನ್ನು ದಿಕ್ಕಾಪಾಲು ಮಾಡಿದ್ದಾರೆ. ಆರೋಪಿಗಳ ಪೈಕಿ ಪ್ರದೂಷ್‌ನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ ನಂತರ ಜೈಲಿನ ಭದ್ರತೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಮಳೆಯಿಂದಾಗಿ ಕೆಲಸದಲ್ಲಿ ವ್ಯತ್ಯಯ ಉಂಟಾಗಿದೆ. ಹೆಚಿನ ಭದ್ರತೆಗಾಗಿ ಕ್ರಮ ವಹಿಸುತ್ತೇವೆ ಎಂದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಭದ್ರತಾ ಕಾರ್ಯ ನಡೆಯುತ್ತಿದೆ. ಪ್ರದೂಷ್ ಭದ್ರತೆಗೆ ಸಹಾಯಕ ಜೈಲರ್ ಹಾಗೂ ಏಳು ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜೈಲಿನಲ್ಲಿ 2G ಜಾಮರ್ ಇದ್ದು, 5U ಜಾಮರ್ ಅಳಡಿಸಲು ಸಿದ್ಧತೆ ನಡೆಸಲಾಗಿದೆ. ಟೆಂಡರ್ ಪಡೆದವರಿಗೆ ಬೇಗ ಮುಗಿಸಿಕೊಡುವಂತೆ ಆಗ್ರಹಿಸಿದ್ದೇವೆ ಎಂದು ತಿಳಿಸಿದರು.