ಚಿಕ್ಕಬಳ್ಳಾಪುರ: ಜಾತಿ ಜನಗಣತಿ ವರದಿ (Caste Census Report) ಜಾರಿಯಾದ್ರೆ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆಯಿದೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ (Chikkaballapur) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಬಲಿಜ ಸಮುದಾಯದ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದವನು. ಜಾತಿ ಜನಗಣತಿ ವರದಿಯಿಂದ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆಯಿದೆ ಎಂದಿದ್ದಾರೆ.
ಈಗಾಗಲೇ ನಾನು ಸಿಎಂ ಸಿದ್ದರಾಮಯ್ಯನವರ ಬಳಿ ನನ್ನ ಸಮುದಾಯಕ್ಕೆ ಉದ್ಯೋಗದ ವಿಚಾರದಲ್ಲಿ 2ಎ ಮೀಸಲಾತಿಗೆ ಬೇಡಿಕೆ ಇಟ್ಟಿದ್ದೇನೆ. ಹೀಗಾಗಿ ಜಾತಿಗಣತಿ ಬಿಡುಗಡೆ ಆದರೆ ನಮ್ಮ ಸಮುದಾಯಕ್ಕೆ ಒಳಿತಾಗಲಿದೆ. ನನ್ನ ಸಮುದಾಯದ ಪರವಾಗಿ ಕೇಳೋದು ನನ್ನ ಧರ್ಮ ಕರ್ತವ್ಯ. ಹಾಗಂತ ವರದಿ ಜಾರಿ ಮಾಡಲೇಬೇಕು ಅಂತ ನಾನು ಆದೇಶ ಮಾಡೋಕಾಗುತ್ತಾ? ಮುಂದಿನ ಬಾರಿ ಎಂಎಲ್‍ಎ ಆಗೋವಷ್ಟರಲ್ಲಿ 2ಎ ಮೀಸಲಾತಿ ಜಾರಿ ಆಗುವಂತೆ ಮಾಡ್ತೀನಿ. ಇದು ನನ್ನ ಸಮುದಾಯಕ್ಕೆ ಇದು ನಾನು ಕೊಡುವ ಭರವಸೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ವೈಯುಕ್ತಿಕ ಸ್ಕಾಲರ್ ಶಿಫ್ ಸ್ಕೀಂ ಘೋಷಣೆ ಮಾಡಿರುವ ಶಾಸಕ ಪ್ರದೀಪ್ ಈಶ್ವರ್, ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ SSLC ಫಲಿತಾಂಶ ಹೆಚ್ಚಳ ಮಾಡಲು ಎಂಎಲ್‍ಎ ಪ್ರದೀಪ್ ಈಶ್ವರ್ ಟೆಸ್ಟ್ ಸೀರೀಸ್ ಎಂಬ ಮತ್ತೊಂದು ಹೊಸ ಕಾರ್ಯಕ್ರಮ ಚಾಲನೆಗೆ ಮುಂದಾಗಿದ್ದಾರೆ.
ಪ್ರತಿದಿನವೂ ಶಾಲೆಗೆ ಪ್ರಶ್ನೆಪತ್ರಿಕೆಗಳನ್ನ ತಲುಪಸಿ ಪರೀಕ್ಷೆ ನಡೆಸಲಾಗುವುದು, ಆಯಾ ದಿನವೇ ಉತ್ತರ ಪತ್ರಿಕೆಗಳನ್ನ ಡಿಡಿಪಿಐ ಕಚೇರಿಗೆ ತಲುಪಿಸಿ ಬೇರೊಂದು ಶಾಲೆಯ ಶಿಕ್ಷಕರು ಅದರ ಮೌಲ್ಯಮಾಪನ ಮಾಡಲಿದ್ದು ವಾರದ ನಂತರ ಫಲಿತಾಂಶ ಪ್ರಕಟಿಸಲಾಗುವುದು. ಇದೇ ರೀತಿ 48 ದಿನ ಇದುವರೆಗೂ ನಡೆದಿರುವ ಪಠ್ಯಕ್ಕೆ ಸಂಬಂಧಿಸಿದ ಪರೀಕ್ಷೆ ನಡೆಸಲಾಗುತ್ತದೆ. ಈ ಹೊಸ ಕಾರ್ಯಕ್ರಮಕ್ಕೆ ಪ್ರಶ್ನೆ ಪತ್ರಿಕೆ ತಯಾರಿಕೆಗೆ 10 ರಿಂದ 15 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಲಿದ್ದು ನನ್ನ ಸ್ವಂತ ಹಣ ಭರಿಸಲಾಗುತ್ತಿದೆ ಅಂತ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.