ಬಾಗಲಕೋಟೆ: ಛಾಯಾಗ್ರಹಣವು ನೈಜ ಜೀವನದ ಅವಿಭಾಜ್ಯ ಅಂಗವಾಗಿದೆ. ಪರಿಣಾಮಕಾರಿ ಫೋಟೋಗ್ರಫಿಯಿಂದ ಸಮಾಜದ ವ್ಯವಸ್ಥೆಯನ್ನು ಸುಸ್ಥಿರವಾಗಿಸುವುದರ ಜೊತೆಗೆ ಗತಿಸಿಹೋದ ಘಟನೆಗಳನ್ನು ನೆನಪುಗಳ ರೂಪದಲ್ಲಿ ಸಂಗ್ರಹಿಸಲು ಸಾಧ್ಯ ಎಂದು ಹಂಪಿಯ ಕನ್ನಡ ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾದ್ಯಾಪಕರಾದ ಡಾ. ಲೋಕೇಶ್ ಎಸ್.ಕೆ ಹೇಳಿದರು.
ಬವ್ಹಿವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹಣ ವಿಭಾಗದಿಂದ ಶುಕ್ರವಾರ ಹಮ್ಮಿಕೊಳ್ಳಲಾದ ಛಾಯಾಗ್ರಹಣ ಮತ್ತು ಸಾಕ್ಷ್ಯಾಚಿತ್ರ ನಿರ್ಮಾಣ ವಿಷಯದ ಸರ್ಟಿಪಿಕೇಟ್ ಕೋರ್ಸ್ ಉದ್ಘಾಟನಾ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಚಾಯಾಗ್ರಹಣವು ಭಾಷೆಗಳನ್ನು ಮೀರಿದ ಸಂವಹನ ಪ್ರಕ್ರಿಯೆಯಾಗಿದ್ದು ಗಡಿ ಮತ್ತು ಸಂಸ್ಕೃತಿಗಳನ್ನು ಮೀರಿ ಜ್ಞಾನ ಹಂಚುವ ದೃಶ್ಯ ಭಾಷೆಯಾಗಿದೆ. ಮಾನವನ ಕಣ್ಣಿನ ಕಾರ್ಯವೈಖರಿಯ ಆಧಾರ ಮೇಲೆ ಕ್ಯಾಮರಾಗಳನ್ನು ಸೃಷ್ಟಿಸಲಾಗಿದ್ದು ಚಿತ್ರ ಸೆರೆಹಿಡಿಯುವಿಕೆಯು ಬೆಳಕಿನೊಂದಿಗಿನ ಆಟ ಎಂದರು.
ಸಾಕ್ಷ್ಯಾಚಿತ್ರ ನಿರ್ಮಾಣವು ಛಾಯಾಗ್ರಹಣದ ಒಂದು ವಿದ. ಮರೆಯಾಗಿ ಉಳಿದ ವಾಸ್ತವವನ್ನು ಜನರಿಗೆ ತಿಳಿಸಲು, ವಿವಿಧ ಪ್ರತಿಭೆಗಳು ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಸಾಕ್ಷ್ಯಚಿತ್ರದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಾಧ್ಯ. ಫೊಟೋಗ್ರಫಿ ಮತ್ತು ಸಾಕ್ಷ್ಯಾಚಿತ್ರ ನಿರ್ಮಾಣದ ಕಲಿಕೆಗೆ ತಾಳ್ಮೆ ಅಧ್ಯಯನದ ಸೂತ್ರವಾಗಿದ್ದು, ಆಸಕ್ತಿ ಮತ್ತು ಕ್ರಿಯಾಶೀಲತೆಯಿಂದ ಈ ಕ್ಷೇತ್ರದಲ್ಲಿ ಸಾಧನೆ ಸಾದ್ಯ. ಮಹಾವಿದ್ಯಾಲಯಗಳಲ್ಲಿ ಇಂತಹ ಕೋರ್ಸ್ ಗಳನ್ನು ಪ್ರಾರಂಭಿಸಿವುದು ಉತ್ತಮ ಸಂಗತಿ ಎಂದರು.
ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಅವರು ಮಾತನಾಡಿ ಫೋಟೋಗ್ರಫಿ ಅಧ್ಯಯನದಿಂದ ನಿಮ್ಮ ಸುತ್ತ ಮುತ್ತಲಿನ ಸನ್ನಿವೇಶಗಳನ್ನೆ ಸೆರೆಹಿಡಿದು ಹಲವರು ಸಾಧಕರಾಗಿದ್ದಾರೆ. ಪತ್ರಿಕೋದ್ಯಮಕ್ಕೆ ಫೋಟೋಗ್ರಫಿ ಒಂದು ಶಕ್ರಿಯಾಗಿದ್ದು, ಕತ್ತಲು ಮತ್ತು ಬೆಳಕನ್ನು ಯಾರು ಸರಿಯಾಗಿ ಬಳಸಿಕೊಳ್ಳುವರೋ ಅವರು ಶ್ರೇಷ್ಠ ಛಾಯಾಗ್ರಾಹಕರಾಗಬಲ್ಲರು. ಸೂಕ್ಷ್ಮ ಅವಲೋಕನದಿಂದ ವಿಭಿನ್ನ ಸಾಕ್ಷ್ಯಾಚಿತ್ರ ನಿರ್ಮಿಸಬಹುದು. ವರದಿ ಪ್ರಸಾರದಲ್ಲಿ ಬಳಸುವ ಫೋಟೋಗಳಿಗೆ ಛಾಯಾಗ್ರಾಹಕರ ಹೆಸರುಗಳನ್ನು ಬಳಸಿದರೆ ಅವರನ್ನು ಸಮಾಜಕ್ಕೆ ಪರಿಚಯಿಸಲು ಸಾಧ್ಯ ಎಂದರು.
ಕಾರ್ಯಾಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಐ.ಬಿ ಚಿಕ್ಕಮಠ ಪ್ರಾಸ್ಥಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕರಾದ ಡಾ. ಎ.ಯು ರಾಠೋಡ, ಪ್ರಾ. ನಟರಾಜ ಇಂಗಳಗಿ ಉಪಸ್ಥಿತರಿದ್ದರು. ಪ್ರಾದ್ಯಾಪಕರಾದ ಎಂ.ಪಿ ದೊಡವಾಡ ವಂದಿಸಿದರು, ಮಹಾಂತೇಶ ಅಂಬಿಗೇರ ನಿರೂಪಿಸಿದರು.