ಬೆಂಗಳೂರು: ನ್ಯಾಯಾಲಯದ ಆದೇಶದ ನಂತರವೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ತೆರೆಯಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿಲ್ಲ. ಇದರಿಂದ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಧರಣಿ ನಡೆಸಿದರು. ಧರಣಿ ವೇಳೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಭೇಟಿ ನೀಡಿದರು.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಇದೆ. ಈ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನೆ ಮಾಡಲಾಗುತ್ತದೆ. ಎಥೆನಾಲ್ ಉತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ಲೈಸೆನ್ಸ್ ನವೀಕರಣ ಆಗಿಲ್ಲ ಎಂದು ಮಂಡಳಿ ಕಾರ್ಖಾನೆಯನ್ನು ಮುಚ್ಚಿಸಿತ್ತು.
ಮಂಡಳಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು. ಕೆಲ ದಿನಗಳ ಹಿಂದೆ ನ್ಯಾಯಾಲಯ ಕಾರ್ಖಾನೆ ತೆರೆಯಲು ಆದೇಶ ನೀಡಿತ್ತು. ಆದೇಶವನ್ನು ಪಾಲಿಸದೇ ಮಂಡಳಿ ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸಿದೆ. ಆದರೆ, ನ್ಯಾಯಾಲಯದ ಆದೇಶದಂತೆ ಕಾರ್ಖಾನೆ ತೆರಯಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಡರಾತ್ರಿ ಮಂಡಳಿ ಕಚೇರಿಯಲ್ಲಿ ಧರಣಿ ನಡೆಸಿದರು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕದಲ್ಲಿ ಚಿಂಚೋಳಿ ಹಿಂದುಳಿದ ತಾಲೂಕು. ಚಿಂಚೋಳಿ ಹೆಚ್ಚು ದಲಿತರು ಇರುವ ಮತ ಕ್ಷೇತ್ರ. ಇಲ್ಲಿ 15 ವರ್ಷದ ಹಿಂದೆ ಪಿ.ಚಿಂದಂಬರಂ ಅವರು ಸಕ್ಕರೆ ಕಾರ್ಖಾನೆ ತೆರಯಲು ಮುಂದಾಗಿದ್ದರು. ಅದೊಂದು ದೊಡ್ಡ ಹಗರಣ, ಸಿಬಿಐ ತನಿಖೆಗೆ ಹೋಯಿತು. ಹರಾಜಿಗೆ 11 ಸಲ ಟೆಂಡರ್ ಕರೆದರೂ ಯಾರು ಮುಂದಾಗಿರಲಿಲ್ಲ. ನಮ್ಮ ರೈತರು ವಿನಂತಿಸಿದ್ದಕ್ಕೆ 38 ಕೋಟಿ ಟೆಂಡರ್ ಮಾಡಿ, ಎಥೆನಾಲ್ ತಯಾರು ಮಾಡುತ್ತಿದ್ದೇನೆ ಎಂದು ತಿಳಿಸಿದರು.