ಬೆಳಗಾವಿ : ಮರಾಠಿ ಭವನ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ 25 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾದ ಪ್ರಕಾಶ್ ಹುಕ್ಕೇರಿ, ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೆ ಆರು ವರ್ಷ ಸೇವೆ ಮಾಡುವ ಅವಕಾಶ ಕೊಟ್ಟಿದ್ದೀರಿ. ಮರಾಠಿ ಭವನ ಕಟ್ಟಲು ಸಹಾಯ ಮಾಡ್ತೀನಿ. ಉದ್ಘಾಟನೆಗೆ ಬೇಕಾದರೆ ಕೊಲ್ಲಾಪುರ ಮಹಾರಾಜರನ್ನು ಕರೆಯಿಸಿ. ಗಡಿಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಅವಶ್ಯಕತೆ ಇದೆ. ಇಲ್ಲಿ ಯಾವ ಭಾಷಾ ಸಮಸ್ಯೆಯೂ ಇಲ್ಲ, ಎಲ್ಲರೂ ಅಣ್ಣತಮ್ಮಂದಿರ ಹಾಗೆ ಇದ್ದೇವೆ ಎಂದೂ ಅವರು ಹೇಳಿದ್ದಾರೆ.
ಇತ್ತೀಚೆಗೆ ಕೊಲ್ಹಾಪುರದ ಕನ್ನೇರಿ ಮಠದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದರು. ನೀವು ಕನ್ನಡ ಭವನ ಕಟ್ಟಿದರೆ ಅದರ ಬೋರ್ಡ್ ಕಿತ್ತೊಗೆಯುತ್ತೇವೆ ಎಂದು ಸ್ಥಳೀಯ ಮರಾಠಿ ಪುಂಡರು ಆವಾಜ್ ಹಾಕಿದ್ದರು. ಈಗ ಅದೇ ಕರ್ನಾಟಕದ ಗಡಿಯಲ್ಲಿ ಮರಾಠಿ ಭವನ ನಿರ್ಮಾಣ ಮಾಡಲು ಪ್ರಕಾಶ್ ಹುಕ್ಕೇರಿ ಮುಂದಾಗಿದ್ದಾರೆ.
ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಮರಾಠಿ ಪ್ರೇಮಕ್ಕೆ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ಮೇಲೆ ಕಲ್ಲು ತೂರಿ ಮಸಿ ಬಳಿದಾಗ ತುಟಿ ಬಿಚ್ಚದ ನಾಯಕರು ಈಗ ಮರಾಠಿಗರ ಓಲೈಕೆಗೆ ನಿಂತು ವೋಟ್ ಪಾಲಿಟಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.