ಬೆಂಗಳೂರು: ದಿನದಿಂದ ದಿನಕ್ಕೆ ಸಾಮಾನ್ಯ ಜನರ ಬದುಕು ದುಬಾರಿಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿದ್ದು ಬಡವರು, ಮಧ್ಯಮವರ್ಗದವರು ಜೀವನ ನಡೆಸುವುದು ಕಷ್ಟವಾಗಿ ಹೋಗಿದೆ. ಈ ಮಧ್ಯೆ, ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದ್ದು ಗ್ರಾಹಕರಿಗೆ ಕಣ್ಣಿರಿಳಿಸುತ್ತಿದೆ. ಸದ್ಯ ರಾಜ್ಯದಲ್ಲಿ ಮಳೆ ತಗ್ಗಿದೆ. ಆದರೂ ಕಳೆದ ತಿಂಗಳು ಬಂದಂತಹ ಅಕಾಲಿಕ ಮಳೆಗೆ ಈರುಳ್ಳಿ ಬೆಳೆ ನೀರುಪಾಲಾಗಿದ್ದು, ಮಳೆಯಿಂದ ರಕ್ಷಿಸಿದ ಈರುಳ್ಳಿ ಇಟ್ಟಲ್ಲೇ ಕೊಳೆತು ಹೋಗುತ್ತಿದೆ. ಹೀಗಾಗಿ ದರ ಏರಿಕೆಯಾಗಿದೆ. ಕೆಜಿಗೆ 50 ರೂ. ಇದ್ದ ಈರುಳ್ಳಿಯ ಬೆಲೆ ಇದೀಗಾ 60 ರಿಂದ 80 ರೂಪಾಯಿ ವರೆಗೆ ಏರಿಕೆಯಾಗಿದೆ.
ಕಳೆದ ಮೂರು ತಿಂಗಳಿನಿಂದ ಈರುಳ್ಳಿಯ ಬೆಲೆ ಏರಿಕೆಯಾಗುತ್ತಲೇ ಇದೆ. ಮಳೆ ಇಲ್ಲದಿದ್ದರೂ ಬೆಲೆ 70 ರ ಗಡಿ ದಾಟಿದೆ. ಕಳೆದ ತಿಂಗಳು ಸುರಿದ ಭಾರಿ ಮಳೆಯ ಪರಿಣಾಮ ನಿರೀಕ್ಷೆಯಷ್ಟು ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲ. ಬಂದಂತಹ ಅಲ್ಪಸ್ವಲ್ಪ ಈರುಳ್ಳಿಯ ಗುಣಮಟ್ಟವೂ ಚೆನ್ನಾಗಿಲ್ಲ. ಹೀಗಾಗಿ ಸದ್ಯ ಈರುಳ್ಳಿಯನ್ನು ಮಹಾರಾಷ್ಟದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಮಹಾರಾಷ್ಟ್ರದಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಇದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.
ಒಂದೆಡೆ ಪೂರೈಕೆ ಕಡಿಮೆಯಾಗಿದ್ದರೆ, ಮತ್ತೊಂದೆಡೆ ಬೇಡಿಕೆಯೂ ಗಣನೀವಾಗಿ ಹೆಚ್ಚಿದೆ. ಪರಿಣಾಮವಾಗಿ ಬೆಲೆ ಏರಿಕೆಯಾಗುತ್ತಿದೆ. ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಸದ್ಯ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಗೆ 70 ರಿಂದ 80 ರೂ. ಇದ್ದರೆ, ಸಣ್ಣಪುಟ್ಟ ಅಂಗಡಿಗಳಲ್ಲಿ ಚಿಲ್ಲರೆ ಮಾರಾಟ ದರ 90 ರೂ. ಆಗಿದೆ. ಮುಂದಿನ ದಿನಗಳಲ್ಲಿ 100 ರ ಗಡಿದಾಟುವ ಸಾಧ್ಯತೆಗಳಿವೆ.