ಬೆಳಗಾವಿ: ರಾಜ್ಯದಲ್ಲಿ ಟೊಮೆಟೋ ಬಳಿಕ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರ ಕೈ ಸುಡುತ್ತಿದೆ. ಕಳೆದ ವಾರ 30 ರಿಂದ 40 ರೂಪಾಯಿ ಇದ್ದ ಈರುಳ್ಳಿ ಬೆಲೆ, ಈಗ 60 ರಿಂದ 80 ರೂ.ಗೆ ತಲುಪಿದೆ. ಹೀಗಾಗಿ ಈರುಳ್ಳಿ ಕೊಂಡುಕೊಳ್ಳುವವರ ಸಂಖ್ಯೆಯೂ ಇಳಿಕೆಯಾಗಿದೆ ಅಂತ ಈರುಳ್ಳಿ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಚಿಕ್ಕೋಡಿಯಲ್ಲಿ ಮಧ್ಯವರ್ತಿಗಳು ಈರುಳ್ಳಿಯನ್ನ ಸ್ಟಾಕ್ ಮಾಡಿಟ್ಟುಕೊಂಡು ಹೆಚ್ಚಿನ ಲಾಭ ಪಡೆಯುವ ಹುನ್ನಾರದಲ್ಲಿ ಇದ್ದಾರೆ. ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಸಿ ಇನ್ನಷ್ಟು ಬೆಲೆ ಏರುವ ನಿರೀಕ್ಷೆಯಲ್ಲಿದ್ದಾರೆ. ಬಡವರ ಪಾಡಂತೂ ಯಾರಿಗೂ ಹೇಳದ ಹಾಗೆ ಆಗಿದೆ. 100 ರೂ.ಗಳಲ್ಲಿ ವಾರದ ಸಂತೆ ಮಾಡುತ್ತಿದ್ದ ಬಡವರು ಒಂದು ಕೆಜಿ ಈರುಳ್ಳಿಗೆ 80 ರೂ. ಕೊಟ್ಟು ಖರೀದಿಸಲು ಕಷ್ಟಪಡುತ್ತಿದ್ದಾರೆ.