ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿಯ ಒಂದು ಸಾವಿರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅ.27ರಂದು ಮುಖ್ಯ ಪರೀಕ್ಷೆ (Village Administration Officer Exam) ನಡೆಸುತ್ತಿದ್ದು ಸಕಲ ರೀತಿಯ ಬಿಗಿ ಕ್ರಮಗಳನ್ನು ಕೈಗೊಂಡಿದೆ.
ವಯೋಮಿತಿ ಸಡಿಲಿಕೆ ನಂತರ ಅರ್ಜಿ ಸಲ್ಲಿಸಿದ ಸುಮಾರು 63 ಸಾವಿರ ಮಂದಿಗೆ ಕನ್ನಡ ಕಡ್ಡಾಯ ಪರೀಕ್ಷೆ, ಅ.26ಕ್ಕೆ ರಾಜ್ಯದ 153 ಕೇಂದ್ರಗಳಲ್ಲಿ ನಡೆಯಲಿದೆ. ಇದರಲ್ಲಿ ಜಿಟಿಟಿಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 2,300 ಮಂದಿಯೂ ಸೇರಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಮುಖ್ಯ ಪರೀಕ್ಷೆ ಅ.27ರಂದು ನಡೆಯಲಿದ್ದು, ಅದನ್ನು ಬರೆಯಲು 4.8 ಲಕ್ಷ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಈ ಸಲುವಾಗಿ 1,173 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ವಸ್ತ್ರ ಸಂಹಿತೆ ಕೂಡ ಇದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.