ನಾಗರ ಪಂಚಮಿ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪಂಚಮಿಯ ನಂತರ ಸಾಲು ಸಾಲು ಹಬ್ಬಗಳು ಬರತೊಡಗುತ್ತದೆ. ವರ ಮಹಾಲಕ್ಷ್ಮಿ ಹಬ್ಬ, ಗಣೇಶ ಚತುರ್ಥಿ, ರಕ್ಷಾ ಬಂಧನ… ಹೀಗೆ ಒಂದರ ಹಿಂದೆ ಒಂದು ಬರತೊಡಗುತ್ತದೆ.
ಪುರಾಣದಲ್ಲಿ ಹಾವಿನ ಕುರಿತಾಗಿ ಹಲವು ಕಥೆಗಳು ಇದೆ. ಅದರಲ್ಲಿ ಪ್ರಮುಖವಾಗಿ ಜನಮೇಜಯ ನಡೆಸಿದ್ದ ಸರ್ಪಯಾಗ ಬಹಳ ವಿಶೇಷ. ಜನಮೇಜಯ ಯಾರು? ಆತ ಸರ್ಪಯಾಗ ನಡೆಸಿದ್ದು ಯಾಕೆ? ನಾಗರ ಪಂಚಮಿಗೆ ಏನು ಸಂಬಂಧ ಎಲ್ಲಾ ಕಥೆಗಳನ್ನು ಇಲ್ಲಿ ತಿಳಿಸಲಾಗಿದೆ.
ಅಭಿಮನ್ಯುವಿನ ಪುತ್ರ ಪರೀಕ್ಷಿತನ ಮಗನಾದ ಜನಮೇಜಯ ವೈಶಂಪಾಯ ಮಹರ್ಷಿಯಿಂದ ಮಹಾಭಾರತದ ಕಥೆಯನ್ನು ಕೇಳುತ್ತಾನೆ. ತನ್ನ ತಂದೆ ಪರೀಕ್ಷಿತನು ಸರ್ಪ ರಾಜ ತಕ್ಷಕನಿಂದ ಕಚ್ಚಿ ಮೃತಪಟ್ಟಿದ್ದನ್ನು ತಿಳಿದು ಸರ್ಪಗಳ ಮೇಲೆ ಸೇಡು ತೀರಿಸಲು ಮುಂದಾಗುತ್ತಾನೆ. ನನ್ನ ತಂದೆಯನ್ನು ಕಚ್ಚಿದ ಸರ್ಪಗಳು ಲೋಕದಲ್ಲೇ ಇರಬಾರದು ಎಂದು ಸಂಕಲ್ಪ ಮಾಡಿ ದೊಡ್ಡ ಸರ್ಪಯಾಗಕ್ಕೆ ಮುಂದಾಗುತ್ತಾನೆ.
ಪರೀಕ್ಷಿತನು ತಕ್ಷಕನಿಂದ ಸಾವನ್ನಪ್ಪಲು ಕಾರಣವಿದೆ. ಕುರುಕ್ಷೇತ್ರ ಯುದ್ಧ ಮುಗಿದು ಕೆಲ ವರ್ಷ ಆಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಪಾಂಡವರ ನಂತರ ಅಭಿಮನ್ಯು – ಉತ್ತರೆಯ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ. ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ಹೋದಾಗ ಬಾಯಾರಿಕೆ ಆಗುತ್ತದೆ. ಈ ವೇಳೆ ಆತ ಶಮಿಕ ಮುನಿಯ ಆಶ್ರಮವನ್ನು ಪ್ರವೇಶಿಸುತ್ತಾನೆ. ಮುನಿ ಧ್ಯಾನಸ್ಥನಾಗಿದ್ದ ಕಾರಣ ಪರೀಕ್ಷಿತನನ್ನು ಸರಿಯಾಗಿ ಸತ್ಕರ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಪರೀಕ್ಷಿತ ಅಲ್ಲೇ ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋಗುತ್ತಾನೆ. ನಂತರ ಮುನಿಪುತ್ರ ಶೃಂಗಿ ಆಶ್ರಮಕ್ಕೆ ಬಂದು ತಂದೆಯ ಕೊರಳಿನಲ್ಲಿ ಹಾವು ಇರುವುದನ್ನು ಕಂಡು ಸಿಟ್ಟಾಗುತ್ತಾನೆ. ಅಷ್ಟೇ ಅಲ್ಲದೇ ನನ್ನ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅವಮಾನ ಮಾಡಿದವನು 7 ದಿನದ ಒಳಗಡೆ ಸರ್ಪ ಕಡಿದು ಸಾವನ್ನಪ್ಪಲಿ ಎಂದು ಶಪಿಸುತ್ತಾನೆ. ಈ ಶಾಪಕ್ಕೆ ತುತ್ತಾಗಿದ್ದ ಪರೀಕ್ಷಿತ ತಕ್ಷಕನಿಂದ ಸಾವನ್ನಪ್ಪುತ್ತಾನೆ.
ತಂದೆಯ ಸಾವಿಗೆ ತಕ್ಷಕ ಕಾರಣ ಎಂದು ತಿಳಿದ ಜನಮೇಜ ದೊಡ್ಡ ಸರ್ಪಯಾಗ ಮಾಡುವಂತೆ ಋತ್ವಿಜರಿಗೆ ಸೂಚಿಸುತ್ತಾನೆ. ಸರ್ಪ ಯಾಗದಲ್ಲಿ ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡುತ್ತಿದ್ದರು. ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದುಹೋಗುತ್ತಿದ್ದವು.