ಬಾಗಲಕೋಟೆ: ಒಳ್ಳೆಯ ಆಲೋಚನೆ, ಆದರ್ಶ ಗುಣಗಳ ಜೊತೆಗೆ ಆಧ್ಯಾತ್ಮಿಕ ಭಾವನೆಗಳನ್ನು ಬೆಳಸಿಕೊಳ್ಳುವುದರಿಂದ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಬದುಕಲು ಸಾಧ್ಯ ಎಂದು ನರೆಗಲ್ಲದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾದ ಪ್ರತಿಭಾ ಪುರಸ್ಕಾರ, ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಆದ್ಯಾತ್ಮ ಎನ್ನುವುದು ಯುವ ಪೀಳಿಗೆಗೆ ಅವಶ್ಯವಾಗಿದ್ದು ಅವರಿಗೆ ಭೋದನೆ ಮಾಡಬೇಕು. ಭಾರತದಲ್ಲಿ ಬೋಗ ಜೀವನಕ್ಕಿಂತ ಯೋಗ ಜೀವನಕ್ಕೆ ಪ್ರಾಮುಖ್ಯತೆ ಇದ್ದು ಯುವಕರು ಯೋಗ ಮತ್ತು ಆಧ್ಯಾತ್ಮವನ್ನು ಅಳವಡಿಸಿಕೊಂಡು ಸಾಧನೆಯತ್ತ ಹೆಜ್ಜೆ ಹಾಕಬೇಕ ಎಂದರು.
ಶರೀರವು ಒಂದು ವರವಾಗಿದ್ದು ಅದನ್ನು ಬಲಿಷ್ಠವಾಗಿಟ್ಟುಕೊಳ್ಳಬೇಕು. ಯುವ ವಯಸ್ಸಿನಲ್ಲಿ ಮನರಂಜನೆ, ದುಷ್ಚಟಗಳತ್ತ ವಾಲದೆ ಇಂದ್ರಿಯಗಳನ್ನು ನಿಗ್ರಹಿಸುವ ಸಾಮರ್ಥ್ಯ ಬೆಳಸಿಕೊಳ್ಳಿ. ಜ್ಞಾನವನ್ನು ಪಡೆಯುವ ಹಂಬಲದಿಂದ ಗುರಿಯತ್ತ ಹೆಜ್ಜೆ ಹಾಕಬೇಕು.ಪಾಲಕರು ಸಂಪಾದಿಸಿದ ಸಂಪತ್ತು ನಂಬಿ ಬದುಕುವುದನ್ನು ರೂಡಿಸಿಕೊಳ್ಳದೆ ನಿಮ್ಮ ಸಂಪಾದನೆ ನಿಮ್ಮಿಂದಲೇಯಾಗಲಿ ಅದು ಸಮಾಜಕ್ಕೆ ಒಳಿತಾಗುವ ದಾರಿಯಲ್ಲಿರಲಿ. ಉತ್ತಮ ಬದುಕು ನಡೆಸುವುದೆ ಸ್ವರ್ಗವಾಗಿದ್ದು, ಸಮಾಜ ವಿರೋಧಿ ಬದುಕು ನರಕವಾಗಿದೆ ಆದ್ದರಿಂದ ಗುಣಾತ್ಮಕ ಜೀವನ ನಡೆಸುವುದರ ಮೂಲಕ ಬದುಕನ್ನು ಸ್ವರ್ಗವಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಅವರು ಮಾತನಾಡಿ ಪದವಿ ಶಿಕ್ಷಣದ ನಂತರ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜೀವನವನ್ನು ನಿರ್ಧರಿಸುತ್ತವೆ. ವಿದ್ಯೆ ಮತ್ತು ವಿನಯತೆಯಿಂದ ವಿಜಯದತ್ತ ಹೆಜ್ಜೆ ಹಾಕಿ. ನಿರಂತರ ಓದಿನಿಂದ ಪುಸ್ತಕದಲ್ಲಿರುವ ಜ್ಞಾನವನ್ನು ಮಸ್ತಕಕ್ಕೆ ತೆಗೆದುಕೊಳ್ಳಬೇಕು. ಸದೃಡ ದೇಹವಿದ್ದಾಗ ಮಾತ್ರ ಉತ್ತಮ ಮನಸ್ಸು, ಸಾಧಿಸುವ ಛಲ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಸಂಸ್ಕೃತಿಕ ಸಮೀತಿ ಸಂಯೋಜಕ ಡಾ.ಕೆ.ವಿ ಮಠ ಮಹಾವಿದ್ಯಾಲಯದ ವಾರ್ಷಿಕ ವರದಿ ವಾಚನ ಮಾಡಿದರು. ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಠೋಡ, ಕ್ರೀಡಾ ಸಮೀತಿ ಸಂಯೋಜಕ ವ್ಹಿ.ಎಸ್ ಚಿಗರಿ, ವಿದ್ಯಾರ್ಥಿ, ವಿದ್ಯಾರ್ಥಿನಿ ಪ್ರತಿನಿಧಿಗಳಾದ ಸುನೀಲ ಕರಿಗಾರ, ಅಂಜಲಿ ಕೊಳಚಿ ಉಪಸ್ಥಿತರಿದ್ದರು.
ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ:
ವಾರ್ಷಿಕವಾಗಿ ವಿವಿಧ ಚಟುವಟಿಕೆಗಳಲ್ಲಿ ಮತ್ತು ವಾರ್ಷಿಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಿ ಪ್ರೊತ್ಸಾಯಿಸಲಾಯಿತು, ಕಬಡ್ಡಿ, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಮೈಮ್, ಸಂಗೀತ, ನೃತ್ಯ, ಚಿತ್ರಕಲೆ, ಭಾಷಣ, ನಾಟಕ ಸೇರಿದಂತೆ ವಿವಿದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು.