ಬಹುನಿರೀಕ್ಷಿತ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಚಂದ್ರಯಾನ 3 ಈಗ ಚಂದ್ರನಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿದೆ ಎಂದು ಇಸ್ರೋ ಹೇಳಿದ್ದು ಯಶಸ್ವಿ ಲ್ಯಾಂಡಿಂಗ್ ನಡೆಯಲಿ ಎಂದು ದೇಶಾದ್ಯಂತ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ.
ಉತ್ತರಾಖಂಡದ ಋಷಿಕೇಶದಲ್ಲಿ ಗಂಗಾರತಿ ಮಾಡಲಾಯ್ತು. ಋಷಿಕೇಶದ ಪರಮಾರ್ಥ ನಿಕೇತನ ಘಾಟ್‌ನಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜದೊಂದಿಗೆ ಗಂಗಾ ಆರತಿ ಮಾಡಿದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಲಿ, ದೇಶದ ಕೀರ್ತಿ ಪತಾಕೆ ಮೇಲಕ್ಕೆ ಹಾರಲಿ ಅಂತಾ ಪ್ರಾರ್ಥಿಸಲಾಯ್ತು.
ಮೈಸೂರು ಬಿಜೆಪಿ ಮುಖಂಡರು ಮಂತ್ರಾಲಯಕ್ಕೆ ತೆರಳಿ ಗುರು ರಾಘವೇಂದ್ರರಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆ ಸಲ್ಲಿಸುವ ಸಲುವಾಗಿ ನಿನ್ನೆ(ಆ.22) ರಂದೇ 82 ಬಿಜೆಪಿ ಕಾರ್ಯಕರ್ತರು ಮೈಸೂರಿನಿಂದ ಮಂತ್ರಾಲಯಕ್ಕೆ ಹೋಗಿದ್ದಾರೆ. ಇಂದು ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಶಾಸಕ ಶ್ರೀವತ್ಸ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಮತ್ತೊಂದೆಡೆ ಕೊಪ್ಪಳ ಜಿಲ್ಲೆ ಗಂಗಾವತಿಯ ಸೇಂಟ್ ಪಾಲ್ಸ್ ಶಾಲೆಯ ಮಕ್ಕಳು ಚಂದ್ರಯಾನ-3 ನ ಪ್ರತಿ ಹಂತದ ಚಿತ್ರ ಬಿಡಿಸಿ ಶುಭಕೋರಿದ್ದಾರೆ. ಚಂದ್ರಯಾನ-3 ಚಿತ್ರ ಬಿಡಿಸಿ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ತಂಡ ಶುಭ ಕೋರಿದ್ದು ಒಡಿಶಾದ ಪುರಿ ಬೀಚ್ನಲ್ಲಿ ಮರಳು ಕಲೆ ರಚಿಸಿ ವಿಕ್ರಂ ಲ್ಯಾಂಡರ್ನ ಸಾಫ್ಟ್ ಲ್ಯಾಂಡಿಂಗ್‌ಗೆ ಶುಭ ಕೋರಿದ್ದಾರೆ. ಬೀಚ್‌ಗೆ ಬರುವ ಪ್ರವಾಸಿಗರು ಕೂಡ ಮರಳು ಕಲೆಯಲ್ಲಿ ಮೂಡಿರುವ ಚಂದ್ರಯಾನವನ್ನ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.