ಹಾಸನ: ಕೆಲವರನ್ನು ನಾನೇ ಮೇವು ಹಾಕಿ ಸಾಕಿದ್ದೇನೆ, ಈಗ ಅವು ನನ್ನ ಮೇಲೆಯೇ ಕುಸ್ತಿ ಮಾಡ್ತಿದ್ದಾವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (H D Revanna) ಬೇಸರ ಹೊರಹಾಕಿದ್ದಾರೆ.
ಜಿಲ್ಲೆಯ ಹಾಲು ಒಕ್ಕೂಟ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿ 30 ವರ್ಷ ಆಯ್ತು. ನಾನು ಕೆಲಸ ಮಾಡಿದ್ದೀನಿ. ನನ್ನ ಮನೆ ಕೆಲಸ ಮಾಡಿಲ್ಲ. ಒಂದು ಕಾರು ತಗೊಳೋಕೆ ಆಗಿಲ್ಲ. ರೇವಣ್ಣ ಅವರನ್ನು ಮುಗಿಸುತ್ತೇವೆ ಎಂದಿದ್ದಾರೆ. ರೇವಣ್ಣ ಅವರನ್ನು, ದೇವೇಗೌಡರನ್ನು (H D Devegowda) ಮುಗಿಸೋಕೆ ಯಾರಿಂದಲೂ ಆಗಲ್ಲ. 1500 ಸೊಸೈಟಿ ನಡೆಸುವುದು ಸುಲಭ ಅಲ್ಲ. ಕೆಲವರನ್ನು ನಾನೇ ಹದಿನೈದು, ಇಪ್ಪತ್ತು ವರ್ಷ ಮೇವು ಹಾಕಿ ಸಾಕಿದ್ದೆ. ಈಗ ಅವು ನನ್ನ ಮೇಲೆ ಕುಸ್ತಿ ಮಾಡ್ತಿದ್ದಾವೆ. ಎಲ್ಲಿ ಹೋಗ್ತಾರೆ ನನ್ ಕೈಗೆ ಸಿಗದೇ, ಕಾಯ್ತಾ ಇದ್ದೀನಿ. ಯಾವುದು ಏನ್ ಇವತ್ತಿಗೆ ಮುಗಿಯಲ್ಲ ಎಂದು ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.
ಏನೋ ಒಂದ್ ಕೇಸ್ ಹಾಕಿ ರೇವಣ್ಣನನ್ನ ಹೆದರಿಸುತ್ತೀನಿ ಅನ್ಕೊಂಡಿದ್ದೀರಾ? ನಾನೇನು ಹೆದರಿ ಓಡಿ ಹೋಗೋದಿಲ್ಲ. ರೇವಣ್ಣ ಅವರನ್ನು, ದೇವೇಗೌಡರನ್ನು ಮುಗಿಸೋಕೆ ಯಾರಿಂದಲೂ ಆಗಲ್ಲ. ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ. ಈಗಲೇ ಏನೂ ಹೇಳಲ್ಲ ನಾಲ್ಕೈದು ತಿಂಗಳು ಕಳೀಲಿ. ದೇವೇಗೌಡರಿಗೆ, ನನಗೆ, ಕುಮಾರಸ್ವಾಮಿಗೆ (H D Kumarswamy) ಶಕ್ತಿ ಕೊಟ್ಟಿರುವ ಜಿಲ್ಲೆ ಇದು. ನನ್ನ ಆಸೆ ಈ ಜಿಲ್ಲೆಯನ್ನು ನಂಬರ್ ಒನ್ ಮಾಡಬೇಕು ಎನ್ನುವುದು ಎಂದಿದ್ದಾರೆ.
ಇದೇ ವೇಳೆ ದೇವಗೌಡರ ಕುರಿತು ಮಾತನಾಡಿದ ಅವರು, ದೇವೇಗೌಡರು ಅಂದ್ರೆ ಒಂದು ಶಕ್ತಿ. ಅವರು ಇಲ್ಲಾ ಅಂದ್ರೆ ಯಾರು ಕೇಳುತ್ತಾರೆ. ಈ ವಯಸ್ಸಿನಲ್ಲಿ ಕಾಶ್ಮೀರಕ್ಕೆ ಹೋಗಿದ್ದರು. ಅಲ್ಲಿ ಅವರ ಕಾಲದಲ್ಲಿ ಮಾಡಿದ ಯೋಜನೆಯನ್ನು ನೋಡಿ ಬಂದಿದ್ದಾರೆ. ನಾವು ಇನ್ನು ಮೂರ್ನಾಲ್ಕು ವರ್ಷ ಹೋದರೆ ಮೂಲೇಲಿ ಕೂತ್ಕೋತೀವಿ ದೇವೇಗೌಡರಿಗೆ 92 ವರ್ಷವಾದರೂ ಓಡಾಡ್ತಾರೆ. ಅವರು ಕೇವಲ ಹತ್ತೂವರೆ ತಿಂಗಳಲ್ಲಿ ಇಡೀ ದೇಶಕ್ಕೆ ಮಾದರಿ ಕೆಲಸ ಮಾಡಿದ್ದಾರೆ. ಸಮಯ ಬಂದಾಗ ವಿಧಾನಸಭೆಯಲ್ಲಿ ಎಳೆ ಎಳೆಯಾಗಿ ಬಿಡಿಸಿ ಹೇಳ್ತೇನೆ ಎಂದು ಸಿಡಿದಿದ್ದಾರೆ.