ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸದನ ಸಮಿತಿಯ ಸಭೆಯು ದಿನಾಂಕ 30 9 2022 ರಂದು ಸನ್ಮಾನ್ಯ ಶ್ರೀ ಕುಮಾರ ಬಂಗಾರಪ್ಪ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧ ಬೆಂಗಳೂರಿನಲ್ಲಿ ಜರುಗಿತು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಜರಿದ್ದರು. ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಸದನ ಸಮಿತಿ ಸದಸ್ಯ ಡಾ. ತಳವಾರ್ ಸಾಬಣ್ಣ ಸಹ ಹಾಜರಿದ್ದರು.
ಅವರು ಸಭೆಯಲ್ಲಿ ಮಾತನಾಡಿ, ಯಾದಗಿರಿ ಸೇಡಂ ಮಹಾಗಾವ್ ಕಾಳಗಿ ಇನ್ನಿತರ ಸರಕಾರಿ ಪದವಿ/ ಜೂನಿಯರ್ ಕಾಲೇಜುಗಳಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸ್ವತಃ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಮಧ್ಯಾಹ್ನ 2 ಗಂಟೆಗೆ ತರಗತಿ/ ಪ್ರಾಕ್ಟಿಕಲ್ ಗಳನ್ನು ತ್ಯಜಿಸಿ ಸಿಕ್ಕ ಬಸ್ಸುಗಳಿಗೆ ತೆರಳುತ್ತಾರೆ. ಮಧ್ಯಾಹ್ನದ ಊಟದ ತೊಂದರೆಯಾಗುತ್ತಿದೆ ಮತ್ತು ತರಗತಿಗಳಿಗೆ ಸಂಪೂರ್ಣವಾಗಿ ಹಾಜರಾಗಲು ಆಗುತ್ತಿಲ್ಲ ಎಂದು ಡಾ. ತಳವಾರ್ ಸಾಬಣ್ಣನವರ ಗಮನಕ್ಕೆ ತಂದಿದ್ದರು.
ಸರಿಯಾದ ಸಮಯಕ್ಕೆ ಬಸ್ ಸೌಕರ್ಯವಿಲ್ಲದ ಪ್ರಯುಕ್ತ ತರಗತಿಗಳಿಗೆ ಲೇಟಾಗಿ ಬರುತ್ತಿರುವುದಾಗಿ ತಿಳಿಸಿದ್ದನ್ನು ಸಭೆಯಲ್ಲಿ ಬಹಳ ಗಂಭೀರವಾಗಿ ಚರ್ಚಿಸಿರುತ್ತಾರೆ. ಸದರಿ ಕಾಲೇಜುಗಳಲ್ಲಿ ಹಿಂದುಳಿದ ಪ್ರದೇಶದ ಬಡ ಮಕ್ಕಳೇ ಹೆಚ್ಚಾಗಿ ಓದುತ್ತಿರುತ್ತಾರೆ , ಎಲ್ಲರೂ ಸ್ವಂತ ವಾಹನ ಸೌಕರ್ಯದ ಶಕ್ತಿ ಹೊಂದಿರುವುದಿಲ್ಲ ಹಾಗಾಗಿ ವಿಶೇಷವಾಗಿ ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳ ಪದವಿ ಕಾಲೇಜುಗಳ ವ್ಯಾಸಂಗಕ್ಕೆ ದಿನಾಲೂ ಬರುವ ವಿದ್ಯಾರ್ಥಿಗಳಿಗೆ ಬೆಳಗಿನ ಜಾವ ಹಾಗೂ ಹಿಂತಿರುಗಿ ಹೋಗಲು ಸಂಜೆಯ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ಸಮಯಕ್ಕೆ ಬಸ್ಗಳ ಸೌಕರ್ಯ ಒದಗಿಸಬೇಕಾಗಿ ಮಾನ್ಯ ಡಾ. ಸಾಬಣ್ಣ ಅವರು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಗಮನಕ್ಕೆ ತಂದು ಗಂಭೀರವಾಗಿ ಚರ್ಚಿಸಿದರು.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಇವರು ಸಕಾರಾತ್ಮಕವಾಗಿ ಸ್ಪಂದಿಸಿ ಎಲ್ಲಾ ಕಾಲೇಜುಗಳಿಂದ ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಗಳ ವ್ಯವಸ್ಥೆ ಮಾಡಲಾಗುವುದೆಂದು ಸಭೆಯಲ್ಲಿ ಭರವಸೆ ನೀಡಿರುತ್ತಾರೆ.