ಬಿಹಾರ: ಬಿಹಾರದ ಬಂಕಾ ಜಿಲ್ಲೆಯ ಮಂದಾರ್ ಹಿಲ್‌ನಲ್ಲಿ ಯುವಕರ ಗುಂಪೊಂದು ಬಾಲಕಿಗೆ ಕಿರುಕುಳ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಜಮುಯಿ ಮತ್ತು ಸಮಸ್ತಿಪುರದಲ್ಲಿ ಇದೇ ರೀತಿಯ ಘಟನೆಗಳು ಗಮನ ಸೆಳೆದ ಕೆಲವೇ ದಿನಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಒಂದು ವಾರದ ಅವಧಿಯಲ್ಲಿ ಇದು ಬಿಹಾರದಲ್ಲಿ ನಡೆದ 3ನೇ ಘಟನೆಯಾಗಿದೆ.
ಸೆ.22ರಂದು ವಾಟ್ಸಪ್ ಮೂಲಕ ವಿಡಿಯೋ ಪೊಲೀಸರ ಗಮನಕ್ಕೆ ಬಂದಿದ್ದು, ಬಳಿಕ ಬೌನ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ವಿಡಿಯೋ ಜೂನ್ 3ರಂದು ಚಿತ್ರೀಕರಿಸಿರುವ ಸಾಧ್ಯತೆ ಇದೆ. ಘಟನೆ ನಡೆದ ಸಂದರ್ಭ ಮತ್ತು ಅದರ ಹಿನ್ನೆಲೆಯನ್ನ ಖಚಿತಪಡಿಸಿಕೊಳ್ಳಲು ತನಿಖೆ ಮುಂದುವರಿದಿದೆ.
ಬಾಲಕಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಮಂದಾರ್ ಹಿಲ್‌ಗೆ ತೆರಳಿದ್ದಳು. ಈ ವೇಳೆ ಮೂವರು ಯುವಕರು ಅವರನ್ನ ನಿಂದಿಸಿ, ಬೆದರಿಕೆ ಹಾಕಿ, ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಪೊಲೀಸರು ಆರೋಪಿಗಳನ್ನು ಅಬ್ದುಲ್ಲಾ, ನಿತೀಶ್ ಕುಮಾರ್ ರೈ ಮತ್ತು ವಿಕಾಸ್ ಕುಮಾರ್ ಎಂದು ಗುರುತಿಸಿದ್ದಾರೆ. ಅವರಲ್ಲಿ ಅಬ್ದುಲ್ಲಾ, ಬಾಲಕಿಯ ಸ್ನೇಹಿತನ ಖಾತೆಯಿಂದ ಆನ್‌ಲೈನ್ ಮೂಲಕ 1,500 ರೂ. ಪಡೆದುಕೊಂಡ ಬಳಿಕ ಅವರನ್ನ ಅಲ್ಲಿಂದ ತೆರಳಲು ಅವಕಾಶ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಪೊಲೀಸರು ವಿವಿಧೆಡೆ ದಾಳಿ ನಡೆಸುತ್ತಿದ್ದಾರೆ. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬಾಲಕಿಯ ಗುರುತನ್ನ ಬಹಿರಂಗಪಡಿಸಲು ಯತ್ನಿಸಿದವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಆರೋಪಿಗಳನ್ನು ಬಂಧಿಸೋದು ಯಾವಾಗ?
ಇನ್ನೂ ವಿಡಿಯೋವನ್ನು ಹಂಚಿಕೊಂಡಿರುವ ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್, ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಮುಯಿ ಮತ್ತು ಸಮಸ್ತಿಪುರದ ಘಟನೆಗಳ ಬಳಿಕ ಇದೀಗ ಬಂಕಾದ ಐತಿಹಾಸಿಕ ಪ್ರವಾಸಿ ತಾಣ ಮಂದಾರ್ ಪರ್ವತದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಕಿರುಕುಳ, ಅಸಭ್ಯ ವರ್ತನೆ ಮತ್ತು ಹಲ್ಲೆ ನಡೆದಿದೆ. ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮರಣ ಶಾಸನವಾಗಿದೆ. ಜಮುಯಿ ಪ್ರಕರಣದಲ್ಲಿ ಐವರು ಆರೋಪಿಗಳ ಪರಿಸ್ಥಿತಿ ಏನಾಗಿದೆ? ಸಮಸ್ತಿಪುರ ಪ್ರಕರಣದ ನಾಲ್ವರು ಆರೋಪಿಗಳಿಗೆ ಸಂಪೂರ್ಣ ಶಿಕ್ಷೆಯಾಗಿದೆಯೇ? ಅಥವಾ ಬೇರೆ ಯಾವುದಾದರೂ ಕಾರಣದಿಂದ ಅವರನ್ನ ಬಿಡುಗಡೆ ಮಾಡಲಾಗಿದೆಯೇ? ಬಂಕಾದ ಆರೋಪಿಗಳನ್ನು ಯಾವಾಗ ಬಂಧಿಸಲಾಗುತ್ತೆ ಎಂದೂ ಪ್ರಶ್ನೆ ಮಾಡಿದ್ದಾರೆ.
