ಬೆಂಗಳೂರು: ನಗರದ ಏರ್‌ಪೋರ್ಟ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಏರ್ಪೋರ್ಟ್ ರಸ್ತೆಯ ಫ್ಲೈ ಓವರ್ ಮೇಲೆ ಅಪಘಾತ (Accident) ಸಂಭವಿಸಿದ್ದು, 5 ವಾಹನಗಳು ಜಖಂಗೊಂಡಿವೆ.
ಚಲಿಸುತ್ತಿದ್ದ ವೇಳೆ ಮುಂದಿನ ವಾಹನ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ವಾಹನಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿವೆ. ಪರಿಣಾಮ 1 ಟಿಪ್ಪರ್, 4 ಕಾರು ಹಾಗೂ 1 ಟಿಟಿ ವಾಹನ ಜಖಂಗೊಂಡಿವೆ. ಇದರಿಂದ ಕೆಲಕಾಲ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಘಟನೆ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ವಾಹನಗಳನ್ನ ತೆರುವೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.




