ಬೆಳಗಾವಿ: ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 7,52,312 ಹೆಕ್ಟೇರ್ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ 37,543 ಕ್ವಿಂಟಲ್‌ನಷ್ಟು ವಿವಿಧ ಬೀಜಗಳು ಹಾಗೂ 1,27,413 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರಗಳ ಬೇಡಿಕೆ ಬಂದಿದೆ. ಕಳೆದ ಬಾರಿ ಕೂಡ ಇಷ್ಟೇ ಪ್ರಮಾಣದ ಬಿತ್ತನೆ ಗುರಿ ಹಾಗೂ ಬೀಜಗಳ ಬೇಡಿಕೆ ಇತ್ತು.
ಆದರೆ, ಈ ಬಾರಿ ರಸಗೊಬ್ಬರ ಬೇಡಿಕೆ ಯಥೇಚ್ಚವಾಗಿ ಏರಿದೆ. ಈ ಬಾರಿ ವಿಶೇಷವಾಗಿ ಕೃಷಿ ಇಲಾಖೆಯಿಂದ ಬೀಜೋಪಚಾರ ಆಂದೋಲನ ಮಾಡಲಾಗುತ್ತಿದೆ. ಪ್ರತಿ ವರ್ಷ ಬೀಜೋಪಚಾರ ಇಲ್ಲದ ಕಾರಣ ಕೆಲವು ಕಡೆ ರೈತರಿಂದ ಕಳಪೆ ಬೀಜದ ತಕರಾರುಗಳು ಕಂಡುಬಂದಿವೆ. ಇದನ್ನು ಮನಗಂಡು ಇಲಾಖೆಯಿಂದಲೇ ಗ್ರಾಮ ಮಟ್ಟದಲ್ಲಿ ಬೀಜೋಪಚಾರ ಆಂದೋಲನ ನಡೆಸಲಾಗುತ್ತಿದೆ.
ಮೇ 22ರವರೆಗೆ 392 ಹಳ್ಳಿಗಳಲ್ಲಿ ಆಂದೋಲನ ಮಾಡಲಾಗಿದೆ. ಬೀಜ ಪರೀಕ್ಷೆ ಮಾಡಿಯೇ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂಬುದು ಅಧಿಕಾರಿಗಳ ಮಾಹಿತಿ.
ಏಪ್ರಿಲ್ ಮೊದಲ ವಾರದಿಂದಲೇ ಜಿಲ್ಲೆಯಲ್ಲಿ ಧಾರಾಕಾರವಾಗಿ ಅಡ್ಡಮಳೆ ಸುರಿದಿದೆ. ಇದರಿಂದ ನೆಲಗಳು ತಕ್ಕಮಟ್ಟಿಗೆ ಹಸಿ ಹಿಡಿದಿವೆ. ಪ್ರತಿ ವರ್ಷದ ಬೇಸಿಗೆಯಲ್ಲಿ ಭೂಮಿ ಒಣಗಿ ಬಿರುಕು ಬಿಡುವಷ್ಟು ಬಿಸಿಲು ಅನುಭವಿಸುತ್ತಿತ್ತು. ಆದರೆ, ಈ ವರ್ಷ ಮೇಲಿಂದ ಮೇಲೆ ಮಳೆ ಬಿದ್ದ ಕಾರಣ ನೆಲದ ಕಾವು ನಿಯಂತ್ರಣದಲ್ಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ರೈತರು ಈಗಾಗಲೇ ಹೊಲ ಹದ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ, ಕೃಷಿ ಇಲಾಖೆಯಿಂದ ಕೂಡ ಬೀಜ, ಗೊಬ್ಬರಗಳ ಸಂಗ್ರಹ ಭರದಿಂದ ಸಾಗಿದೆ.
ಜಿಲ್ಲೆಯಲ್ಲಿ ಒಟ್ಟು 35 ರೈತ ಸಂಪರ್ಕ ಕೇಂದ್ರಗಳಿವೆ. ಇದರೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 172 ಕೇಂದ್ರಗಳಲ್ಲಿ ಅಗತ್ಯ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡುವ ಕಾರ್ಯ ಭರದಿಂದ ಸಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಎಚ್.ಡಿ.ಕೋಳೇಕರ ಮಾಹಿತಿ ನೀಡಿದ್ದಾರೆ.
ಆದರೆ, ನಮ್ಮ ಕೇಂದ್ರಗಳಿಗೆ ಇನ್ನೂ ಬೀಜಗಳೇ ಬಂದಿಲ್ಲ ಎಂದು ಹಲವು ರೈತರಿಂದ ದೂರುಗಳೂ ಕೇಳಿಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿದ ಕೋಳೇಕರ, 'ಮೇ 25ರವರೆಗೂ ಸಂಗ್ರಹ ಮಾಡುವ ಕಾರ್ಯ ಮುಂದುವರಿಯಲಿದೆ. ರೈತರಿಗೆ ಸಮರ್ಪಕ ಬೀಜ, ಗೊಬ್ಬರ ದಾಸ್ತಾನು ಮಾಡಲಾಗುವುದು. ಆತಂಕ ಪಡಬೇಕಾಗಿಲ್ಲ' ಎಂದಿದ್ದಾರೆ.
ಜತೆಗೆ, ಮಧ್ಯಪ್ರಾಚ್ಯದಲ್ಲಿ ನಡೆದ ಯುದ್ಧದ ಕಾರಣ ರಾಸಾಯನಿಕ ಗೊಬ್ಬರಗಳ ಕೊರತೆ ಉಂಟಾಗುವ ಸಂಭವವಿದೆ. ಇದನ್ನು ಮುಂಜಾಗೃತಾ ಕ್ರಮವಾಗಿ ಮನಗಂಡು, ಮಾರ್ಚ್‌ನಿಂದಲೇ ಸಂಗ್ರಹ ಇಟ್ಟುಕೊಳ್ಳುವಂತೆ ಎಲ್ಲ ಡೀಲರ್‌ಗಳಿಗೂ ಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದರು.
ಎಚ್.ಡಿ.ಕೋಳೇಕರ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಬೆಳಗಾವಿಸದ್ಯದ ಮಳೆಗೆ ರೈತರು ಬಿತ್ತನೆ ಮಾಡಬಾರದು. ನೆಲದ ಬಿಸಿ ಇನ್ನೂ ಆರಿಲ್ಲ. ಹದವಾದ ಮಳೆಯಾಗಿ ನೆಲವು ಪೂರ್ಣ ಪ್ರಮಾಣದಲ್ಲಿ ಹಸಿ ಹಿಡಿದ ಮಾಡಬೇಕು. ಅವಸರ ಬೇಡ.



