ಬೆಳಗಾವಿ: ನವರಾತ್ರಿ ಉತ್ಸವದ ಅಂಗವಾಗಿ ಬೆಳಗಾವಿ ನಗರದಲ್ಲಿ ದೇವಿ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯುತ್ತಿವೆ. ಇದರ ಭಾಗವಾಗಿ ಬಿಜೆಪಿ ನಾಯಕ ನಾಗರಾಜ್ ಪಾಟೀಲ್ ಆಯೋಜಿಸಿರುವ ಮೂರು ದಿನಗಳ ರಾಸ ಉತ್ಸವಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು.
ನಗರದ ಫೀನಿಕ್ಸ್ ಶಾಲೆಯ ಸಮೀಪದ ಮೈದಾನದಲ್ಲಿ ಅಕ್ಟೋಬರ್ 17, 18 ಮತ್ತು 19ರಂದು ರಾಸ ಉತ್ಸವ ಹಾಗೂ ಗರ್ಭಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉತ್ಸವಕ್ಕಾಗಿ ಆಕರ್ಷಕವಾಗಿ ಮೈದಾನವನ್ನು ಸಜ್ಜುಗೊಳಿಸಲಾಗಿದ್ದು, ಸುಂದರ ಬೆಳಕಿನ ಅಲಂಕಾರ, ಅತ್ಯುತ್ತಮ ಸಂಗೀತ ವ್ಯವಸ್ಥೆ ಹಾಗೂ ಗರ್ಭಾ ನೃತ್ಯಕ್ಕೆ ಅನುಕೂಲವಾಗುವ ವಿಶಾಲ ಮೈದಾನವನ್ನು ಸಿದ್ಧಪಡಿಸಲಾಗಿದೆ.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ ಅವರು ದುರ್ಗಾದೇವಿಯ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಯುವಕ-ಯುವತಿಯರು ಹಾಗೂ ಕುಟುಂಬದ ಸದಸ್ಯರು ಪಾಲ್ಗೊಂಡು, ಸಂಗೀತದ ಲಯಕ್ಕೆ ತಕ್ಕಂತೆ ಗರ್ಭಾ ನೃತ್ಯ ಮಾಡುವ ಮೂಲಕ ನವರಾತ್ರಿ ಸಂಭ್ರಮದಲ್ಲಿ ಭಾಗಿಯಾದರು.
**ಸಂಸ್ಕೃತಿ, ಪರಂಪರೆ ಉಳಿಸುವ ಉದ್ದೇಶ**
ಕಾರ್ಯಕ್ರಮದ ಆಯೋಜಕ ನಾಗರಾಜ್ ಪಾಟೀಲ್ ಮಾತನಾಡಿ, ನಮ್ಮ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇಂತಹ ಉತ್ಸವಗಳ ಮುಖ್ಯ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ ಬೆಳೆಸುವುದರೊಂದಿಗೆ ಸಮಾಜಮುಖಿ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತವೆ. ನವರಾತ್ರಿ ಅಂಗವಾಗಿ ಆಯೋಜಿಸಿರುವ ಈ ಉತ್ಸವದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ರಾಸ ಉತ್ಸವದಲ್ಲಿ ಬೆಳಗಾವಿ ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ್ ಪಾಟೀಲ್, ಬಿಜೆಪಿ ನಾಯಕಿ ಉಜ್ವಲ ಬಡವಾನೆ, ಲಿಂಗರಾಜ್ ಪಾಟೀಲ್ ಸೇರಿದಂತೆ ಹಲವು ಗಣ್ಯರು, ಯುವಕ-ಯುವತಿಯರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.



