ಹಾವೇರಿ: ನೌಕಾಪಡೆಯ ಯೋಧ ಕರ್ತವ್ಯದ ವೇಳೆ ಹುತಾತ್ಮರಾದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದ ನಿವಾಸಿ ಯಶೋಧರ ವಡ್ಡರ್ (29) ಭಾರತೀಯ ನೌಕಾಪಡೆಯ ಯೋಧ. ಕರ್ತವ್ಯದ ವೇಳೆ ಕೇರಳದ ಕೊಚ್ಚಿಯಲ್ಲಿ ನಡೆದ ಫೈರಿಂಗ್ ತರಬೇತಿ ಸಂದರ್ಭ ಹುತಾತ್ಮರಾಗಿದ್ದಾರೆ. ಕಳೆದ 10 ವರ್ಷಗಳಿಂದ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯಶೋಧರ ವಡ್ಡರ್, 2016ರಲ್ಲಿ ನೌಕಾದಳಕ್ಕೆ ಸೇರ್ಪಡೆಯಾಗಿದ್ದರು.
ಹುತಾತ್ಮ ಯೋಧನ ಪಾರ್ಥಿವ ಶರೀರ ಸ್ವಗ್ರಾಮ ಉಪ್ಪುಣಸಿಗೆ ಆಗಮಿಸಿದ್ದು, ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ದೇಶ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧನ ನಿಧನಕ್ಕೆ ಗ್ರಾಮಸ್ಥರು, ಬಂಧು-ಬಳಗ ಹಾಗೂ ವಿವಿಧ ಸಂಘಟನೆಗಳು ತೀವ್ರ ಸಂತಾಪ ಸೂಚಿಸಿದ್ದಾರೆ.



