ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕೊಪ್ಪಳದ ಗವಿಮಠಕ್ಕೆ ಆಗಮಿಸಿ ಗವಿಶ್ರೀಗಳಿಗೆ ಮೈಸೂರು ದಸರಾಗೆ ಅಧಿಕೃತ ಆಹ್ವಾನ ನೀಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರ್ಷ ದಸರಾ ಉದ್ಘಾಟನೆಗೆ ಕೊಪ್ಪಳ ಶ್ರೀಗಳನ್ನ ಆಯ್ಕೆ ಮಾಡಿದ್ದು ಖುಷಿ ತಂದಿದೆ. ಶ್ರೀಗಳನ್ನ ಒಪ್ಪಿಸಲಿಕ್ಕೆ ಸಿಎಂ ಡಿಕೆಶಿ ಅವರು ಮನವಿ ಮಾಡಿದ್ದರು. ಅದರಂತೆ ಪ್ರೀತಿ ವಿಶ್ವಾಸದಿಂದ ಶ್ರೀಗಳು ಒಪ್ಪಿಕೊಂಡಿದ್ದಾರೆ. ಆದರೆ ಕೆಲವೊಂದಿಷ್ಟು ಕಿಡಿಗೇಡಿಗಳು ಅಪಪ್ರಚಾರ ಮಾಡುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶ್ರೀಗಳು ಸೂಕ್ಷ್ಮ ಸ್ವಭಾವದವರು, ಯಾರೇ ಇರಲಿ ಅಪಪ್ರಚಾರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅಧಿಕೃತ ಸಾಕ್ಷಿಗಳಿಲ್ಲದೇ ಮಾಧ್ಯಮಗಳಲ್ಲಿ ಬರುವ ಕೆಲಸ ಆಗಿದೆ. ಇವತ್ತು ಸುಳ್ಳು ಸುದ್ದಿ ಮಾಡಿದ ಮಾಧ್ಯಮದವರ ಮೇಲೆ ನೋಟಿಸ್ ನೀಡುವ ಕೆಲಸ ಆಗುತ್ತದೆ ಎಂದಿದ್ದಾರೆ.
ಇದು ನಮ್ಮ ಜಿಲ್ಲೆಗೆ ಸಿಕ್ಕಿರುವ ಸೌಭಾಗ್ಯ, ಇಂತಹ ಶ್ರೀಗಳಿಂದ ಉದ್ಘಾಟನೆ ಮಾಡಿಸುವುದು ನಮ್ಮ ಸರ್ಕಾರಕ್ಕೆ ಹೆಮ್ಮೆ ತರುವ ಕೆಲಸ. ಶ್ರೀಗಳಿಗೆ ಅದ್ದೂರಿತನ ಬೇಡ ಅಂತ ಹೇಳ್ತಾರೆ. ಎಲ್ಲರೂ ಇದನ್ನ ಅರ್ಥ ಮಾಡ್ಕೊಬೇಕು, ಇಂತಹವರಿಂದ ದಸರಾ ಉದ್ಘಾಟನೆ ಆಗ್ತಿದೆ. ಶ್ರೀಗಳಿಗೆ ಸಿಕ್ಕಿರೋದು ಇದು ನಮ್ಮ ಪುಣ್ಯ. ಈ ಹಿಂದೆ ಮೂರು ಜನರಿಗೆ ನಾನು ಆಹ್ವಾನ ಕೊಟ್ಟಿದ್ದೇನೆ, ಈ ರೀತಿ ಯಾವಾಗ್ಲೂ ಆಗಿಲ್ಲ. ಅಧಿಕೃತವಾಗಿ ನಾವು ಮತ್ತು ಮಠದವರು ಇದರ ಬಗ್ಗೆ ಹೇಳಬೇಕು. ಇಂತಹ ಅನುಭವ ಆಗಿರಲಿಲ್ಲ, ಈಗ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.
