LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು

Advertisement
Advertisement

ಬೆಂಗಳೂರು: ಕೆಪಿಎಸ್‌ಸಿ  ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡಿ ರಾಜ್ಯಪಾಲರು  ಆದೇಶ ಹೊರಡಿಸಿದ್ದಾರೆ.

ಅಮಾನತು ಮಾಡಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್  ಅವರು, ಶಿವಶಂಕರಪ್ಪ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಅಗತ್ಯ ತನಿಖೆಗಾಗಿ ಭಾರತದ ಸಂವಿಧಾನದ 317(1)ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ಜೊತೆಗೆ ತನಿಖೆ ಕುರಿತು ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ಆಯೋಗದ ಅಧ್ಯಕ್ಷ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಶಿವಶಂಕರಪ್ಪ ಅವರನ್ನು ಅಮಾನತು ಮಾಡಿದ್ದಾರೆ. ಅಲ್ಲಿಯವರೆಗೆ ಆಯೋಗದ ಹಿರಿಯ ಸದಸ್ಯರು ಕರ್ನಾಟಕ ಲೋಕ ಸೇವಾ ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಆದೇಶಿಸಿದ್ದಾರೆ.
ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ ಇವರ ವಿರುದ್ಧ ಸ್ವಜನ ಪಕ್ಷಪಾತ, ಮಾಹಿತಿಯನ್ನು ಬಹಿರಂಗಪಡಿಸದೇ ಇರುವುದು ಇತ್ಯಾದಿ ದೂರುಗಳು ಬಂದಿದ್ದು, ಅವರ ಇಬ್ಬರು ಹೆಣ್ಣುಮಕ್ಕಳನ್ನು ಕಾನೂನುಬಾಹಿರವಾಗಿ, ಅಧಿಕಾರ ದುರುಪಯೋಗಪಡಿಸಿಕೊಂಡು, ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಅವರ ನೇರ ಅವಲಂಬಿತರು ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗ ಅಧ್ಯಕ್ಷರು ತಾವು ಈ ನೇಮಕಾತಿ ಪ್ರಕ್ರಿಯೆಯಿಂದ ದೂರವಿರಲು ಅಥವಾ ಹಿತಾಸಕ್ತಿ ಸಂಘರ್ಷವನ್ನು ಔಪಚಾರಿಕವಾಗಿ ಘೋಷಿಸಲು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ.

ಅಧ್ಯಕ್ಷರ ಪುತ್ರಿಯೊಬ್ಬರು ತಮ್ಮ ಕುಟುಂಬದ ವಾರ್ಷಿಕ ಆದಾಯವನ್ನು 40,000 ರೂ. ಎಂದು ಘೋಷಿಸುವ ಮೂಲಕ ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ವಾಸ್ತವವಾಗಿ ನಿಗದಿತ ಮಿತಿಗಿಂತ ಹೆಚ್ಚಿನ ಆದಾಯವಿದ್ದರೂ ಮತ್ತು ತಮ್ಮ ತಂದೆ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅರಿವಿದ್ದರೂ, ಸತ್ಯಾಂಶಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ ಹಾಗೂ ತಿರುಚಿದ ಕಡಿಮೆ ಆದಾಯದ ಘೋಷಣೆಗಳನ್ನು ಬಳಸಿಕೊಂಡು, ಅಧ್ಯಕ್ಷರ ಪುತ್ರಿ ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ‘ಕ್ರೀಮಿ ಲೇಯರ್’ ವಿನಾಯಿತಿಯನ್ನು ಕೋರಿದ್ದಾರೆ ಎಂಬುದನ್ನು ಈ ಸಾಕ್ಷಗಳು ಸೂಚಿಸುತ್ತವೆ.

ಇದಲ್ಲದೇ, 2002ರ ಮಾರ್ಚ್ 30ರ ಸರ್ಕಾರಿ ಆದೇಶ ಸಂಖ್ಯೆ SWD 225 BCA 2000ರ ಪ್ರಕಾರ, ಕರ್ನಾಟಕದಲ್ಲಿ ಲೋಕ ಸೇವಾ ಆಯೋಗದ  ಅಧ್ಯಕ್ಷರ ಮಕ್ಕಳು ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿಯನ್ನು ಪಡೆಯಲು ಅರ್ಹರಲ್ಲ. ಈ ನಿರ್ಬಂಧವಿದ್ದರೂ ಸಹ, ನಿಯಮ ಮೀರಿ ಲಾಭ ಪಡೆಯುವ ಉದ್ದೇಶದಿಂದ, ಅಧ್ಯಕ್ಷರು ಮತ್ತು ಅವರ ಪುತ್ರಿ ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಾರೆ. ಆಯೋಗದ ಮುಖ್ಯಸ್ಥರ ಆಡಳಿತಾತ್ಮಕ ಮೇಲ್ವಿಚಾರಣೆಯ ಕೊರತೆ ಅಥವಾ ಉದ್ದೇಶಪೂರ್ವಕ ನಿರ್ಲಕ್ಷವಿಲ್ಲದೆ ಇಂತಹ ಕೃತ್ಯ ನಡೆಯಲು ಸಾಧ್ಯವಿಲ್ಲ ಎಂಬ ಅಂಶ ತಿಳಿದು ಬರುತ್ತದೆ.

ಅಧ್ಯಕ್ಷರು ಸಲ್ಲಿಸಿದ ಆದಾಯ ಮತ್ತು ಆಸ್ತಿ ವಿವರಗಳು ಹಾಗೂ ಇನ್ನಿತರ ದಾಖಲೆ ಮತ್ತು ಸಂಗತಿಗಳು ಆಯೋಗದ ಅಧ್ಯಕ್ಷರ ಕಡೆಗೆ ಸ್ಪಷ್ಟವಾಗಿ ಬೊಟ್ಟು ಮಾಡುತ್ತವೆ. ಪ್ರಕರಣದ ಸತ್ಯಾಂಶಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿದಾಗ, ಇದು ಅವರ ದುರ್ನಡತೆಗೆ ಸಮಾನವಾಗಿರುತ್ತದೆ.

ಕೆಪಿಎಸ್‌ಸಿ ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್:
ಸರ್ಕಾರಿ ಹುದ್ದೆ ಪಡೆಯಲು ತಂದೆಯ ಪ್ರಭಾವ ಬಳಸಿ ಅತ್ಯಂತ ಕಡಿಮೆ ಆದಾಯದ ನಕಲಿ ಪ್ರಮಾಣಪತ್ರ ಸಲ್ಲಿಸಿದ ಗಂಭೀರ ಆರೋಪ ಇವರ ಮೇಲಿದ್ದು, ಕೆಪಿಎಸ್‌ಸಿ (KPSC) ಕಾರ್ಯದರ್ಶಿ ಶೋಭಾ ಅವರ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿ ಅಧ್ಯಕ್ಷರ ಮಗಳು ಸುಮಾ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಹಿಂದುಳಿದ ವರ್ಗಗಳ ಮೀಸಲಾತಿ ಅಥವಾ ಶುಲ್ಕ ವಿನಾಯಿತಿ ಪಡೆಯುವ ದುರುದ್ದೇಶದಿಂದ ಅವರು ತಮ್ಮ ವಾರ್ಷಿಕ ಆದಾಯ ಕೇವಲ 40,000 ರೂ. ಎಂದು ನಮೂದಾಗಿದ್ದ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. 

ಸುಮಾ ಅವರ ತಂದೆ ಶಿವಶಂಕರ್ ಸಾಹುಕಾರ್ ಅವರು ಈ ಹಿಂದೆ ಲೋಕಸೇವಾ ಆಯೋಗದ ಸದಸ್ಯರಾಗಿದ್ದಾಗಲೇ ತಿಂಗಳಿಗೆ 2 ಲಕ್ಷ ರೂ. ಅಧಿಕ ಸಂಬಳ ಪಡೆಯುತ್ತಿದ್ದರು. ಪ್ರಸ್ತುತ ಅವರು ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದು, ಮತ್ತಷ್ಟು ಹೆಚ್ಚಿನ ವೇತನ ಮತ್ತು ಸೌಲಭ್ಯಗಳನ್ನು ಹೊಂದಿದ್ದಾರೆ. ಇಷ್ಟೊಂದು ಭಾರೀ ಆದಾಯ ಹೊಂದಿದ್ದರೂ, ಸರ್ಕಾರದ ಅತ್ಯುನ್ನತ ಹುದ್ದೆಯಲ್ಲಿದ್ದವರ ಮಗಳು ಬಡತನ ರೇಖೆಗಿಂತ ಕೆಳಗಿರುವವರಂತೆ ನಕಲಿ ದಾಖಲೆ ಸೃಷ್ಟಿಸಿದ್ದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ಹಗರಣದ ಟೈಮ್‌ಲೈನ್
ಮೇ 12, 2025 – ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳಿಗಾಗಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆದಿತ್ತು.
ಜುಲೈ 13, 2025 – ಹುದ್ದೆಯ ಮುಖ್ಯ ಸ್ಪರ್ಧಾತ್ಮಕ ಪರೀಕ್ಷೆ ಜರುಗಿತ್ತು. ಇದರಲ್ಲಿ ಸುಮಾ ಉತ್ತೀರ್ಣರಾಗಿದ್ದರು.
ಜನವರಿ 21, 2026 – ಕೆಪಿಎಸ್‌ಸಿ ವತಿಯಿಂದ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಯಿತು.
ಫೆಬ್ರವರಿ 19, 2026 – ಅರ್ಹತೆ ಪಡೆದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೆಪಿಎಸ್‌ಸಿ ಅಧಿಕಾರಿಗಳು ಸುಮಾ ಅವರ ಆದಾಯ ಪ್ರಮಾಣಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ನಕಲಿ ಎಂಬ ಮಹಾ ವಂಚನೆ ಬೆಳಕಿಗೆ ಬಂದಿದೆ.

ಪ್ರಮಾಣಪತ್ರ ಕೊಟ್ಟಿದ್ದು ಯಾರು?
ಈ ನಕಲಿ ಪ್ರಮಾಣಪತ್ರ ಸೃಷ್ಟಿಯ ಹಿಂದೆ ಕಂದಾಯ ಇಲಾಖೆಯ ದೊಡ್ಡ ಜಾಲವೇ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೆಪಿಎಸ್‌ಸಿ ಅಧ್ಯಕ್ಷರ ಮಗಳಿಗೆ ಇಷ್ಟೊಂದು ಕಡಿಮೆ ಆದಾಯದ ಪತ್ರ ಮಾಡಿಕೊಟ್ಟ ಗ್ರಾಮ ಲೆಕ್ಕಾಧಿಕಾರಿ, ರೆವಿನ್ಯೂ ಇನ್ಸ್ಪೆಕ್ಟರ್ ಮತ್ತು ತಹಶೀಲ್ದಾರ್ ಅವರ ಕೈವಾಡದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮತ್ತೊಂದೆಡೆ, ಪುತ್ರಿಗೆ ಅಡ್ಡದಾರಿಯಲ್ಲಿ ಉದ್ಯೋಗ ಕೊಡಿಸಲು ಸ್ವತಃ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರ್ ಸಾಹುಕಾರ್ ಅವರೇ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಎದ್ದಿದೆ. ಈ ಪ್ರಕರಣದಲ್ಲಿ ಕೇವಲ ಪುತ್ರಿ ಮಾತ್ರವಲ್ಲದೆ ಅಧ್ಯಕ್ಷರ ಮೇಲೂ ಕಾನೂನು ಕ್ರಮ ಜರುಗುವ ಸಾಧ್ಯತೆ ದಟ್ಟವಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತುಲೈಗಿಂಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ – ಹೆಚ್.ಡಿ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್ವಿದೇಶಾಂಗ ನೀತಿ ಟ್ರಂಪ್‌ಗೆ ಅಡವಿಟ್ಟ ಮೋದಿ: ಪ್ರಿಯಾಂಕ್‌ ಟೀಕೆಪೋಕ್ಸೋ ಪ್ರಕರಣ – ವಚನಾನಂದ ಸ್ವಾಮೀಜಿಗೆ ಜಾಮೀನು ಮಂಜೂರುಬಿಡದಿ ಟೌನ್‌ಶಿಪ್‌ ಜಟಾಪಟಿ – ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆ ಏಟು!ಶಿವಮೊಗ್ಗದ ಮುಪ್ಪಾನೆ – ಹಲ್ಕೆ ನಡುವಿನ ಲಾಂಚ್ ಸೇವೆ ಪುನಾರಂಭನೇಪಾಳದಲ್ಲಿ ಬೆಳಗಾವಿ ಯುವಕನ ಬರ್ಬರ ಹತ್ಯೆ – ರೂಮ್‌ಮೇಟ್‌ನಿಂದಲೇ ಕೃತ್ಯಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಪತಿಯೂ ನೇಣಿಗೆ ಶರಣು – ಪ್ರಾಣಬಿಟ್ಟ ನವದಂಪತಿರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ತನಿಖಾ ವರದಿ ಸಲ್ಲಿಸುವಂತೆ ಸುಪ್ರೀಂ ಆದೇಶಚಲಿಸುತ್ತಿದ್ದ ಟ್ರೈನ್‌ನಲ್ಲಿ ಪೂಜೆ – 3 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಖಾಸಗಿ ಕೋಚ್ ಬುಕ್ ಆಗಿತ್ತು: ರೈಲ್ವೇ ಇಲಾಖೆ ಸ್ಪಷ್ಟನೆ