ಬೆಳಗಾವಿ: ಬಿ.ಕೆ. ಹರಿಪ್ರಸಾದ್ ಅವರಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ ಕನಿಷ್ಠ ಜ್ಞಾನವಿಲ್ಲ. ಮೊದಲು ಅವರು ನನ್ನ ಪತ್ರವನ್ನು ಸರಿಯಾಗಿ ಕನ್ನಡದಲ್ಲಿ ಓದುವುದನ್ನು ಕಲಿಯಲಿ. ಅವರಿಗೆ ಶಾಲೆ ಕಲಿಸಿಲ್ಲವೇ ಅಥವಾ ಪ್ರಚಾರದ ಹುಚ್ಚಿನಿಂದ ಹೀಗೆ ಮಾತನಾಡುತ್ತಿದ್ದಾರಾ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.
ಅಭಯ್ ಪಾಟೀಲ್ ತನ್ನ ಕ್ಷೇತ್ರದಲ್ಲಿ ಸುಮಾರು 2,500 ಮತಗಳನ್ನು ಡಿಲೀಟ್ ಮಾಡಲು ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್( ಆರೋಪಕ್ಕೆ ಇಂದು ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದರು.
ಚುನಾವಣಾಧಿಕಾರಿಯಾಗಿರುವ ಮಹಾನಗರ ಪಾಲಿಕೆ ಆಯುಕ್ತರಿಗೆ ಬರೆದ ಪತ್ರದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಎಲ್‌ಒ-1 (BLO-1) ಆಗಿ ಪತ್ರ ಬರೆದಿದ್ದೇನೆ. ಕ್ಷೇತ್ರದಲ್ಲಿ ನಕಲಿ ಮತದಾರರು ಹಾಗೂ ಮೃತಪಟ್ಟವರ ಹೆಸರುಗಳು ಪಟ್ಟಿಯಲ್ಲಿವೆ. ಇವುಗಳನ್ನು ರದ್ದುಪಡಿಸಲು ಬಿಎಲ್‌ಒ-2 ಸಲ್ಲಿಸಿರುವ ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ, ನಕಲಿ ದಾಖಲೆಗಳಿದ್ದರೆ ಮಾತ್ರ ರದ್ದುಪಡಿಸುವಂತೆ ಮನವಿ ಮಾಡಿದ್ದೇನೆ. ಚುನಾವಣಾ ಆಯೋಗದ ನಿಯಮಗಳಿಗೆ ಬದ್ಧವಾಗಿಯೇ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.
ಇಷ್ಟೇ ಅಲ್ಲದೆ ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಬಿ.ಕೆ. ಹರಿಪ್ರಸಾದ್ ನಡುವೆ ಪ್ರಚಾರಕ್ಕಾಗಿ ಪೈಪೋಟಿ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.
