ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಸುವಂತಿಲ್ಲ ಎಂಬ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ಗ್ಯಾರಂಟಿ ಪರಿಷ್ಕರಣೆ ಪೂರ್ವಭಾವಿಯಾಗಿ ಗ್ಯಾರಂಟಿ ಕಮಿಟಿ ಹಾಗೂ ಅಧಿಕಾರಿಗಳ ಜೊತೆ ಸಿಎಂ ಶುಕ್ರವಾರ ಸಭೆ ನಡೆಸಿದರು. ಗ್ಯಾರಂಟಿ ಯೋಜನೆಗೆ ಮರು ಅರ್ಜಿ ಸಲ್ಲಿಸುವಂತಿಲ್ಲ. ಹೊಸದಾಗಿ ಅರ್ಜಿ ಬದಲಾಗಿ ಮರುಪರಿಶೀಲನೆ ಮಾಡಲು ಸಭೆಯಲ್ಲಿ ಸರ್ಕಾರ ತೀರ್ಮಾನಿಸಿದೆ.
ಈಗಿರುವ ಫಲಾನುಭವಿಗಳ ಮರು ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ಮರು ಪರಿಶೀಲನೆ ಯಾರು ಮಾಡಬೇಕು, ಹೇಗೆ ಮಾಡಬೇಕು ಎಂಬುದನ್ನು ಮೂರು ದಿನದೊಳಗೆ ಅಂತಿಮಪಡಿಸಿ ತಿಳಿಸಲು ಸಿಎಂ ಸೂಚನೆ ನೀಡಿದ್ದಾರೆ.
ಒಬ್ಬೇ ಒಬ್ಬ ಅರ್ಹ ಫಲಾನುಭವಿಗಳಿಗೆ ತೊಂದರೆ ಆಗಬಾರದು. ಅನರ್ಹ ಫಲಾನುಭವಿಗಳ ದುರುಪಯೋಗಕ್ಕೆ ಮಾತ್ರ ಬ್ರೇಕ್ ಹಾಕಬೇಕು ಎಂದು ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದರು.
ಹಲವು ಫಲಾನುಭವಿಗಳು ಬ್ಯಾಂಕ್ ಸಾಲ ಪಡೆದಿರುತ್ತಾರೆ. ಸಾಲದ ಖಾತೆಗೆ ಗೃಹಲಕ್ಷ್ಮಿ ಹಣ ಹೋದ ತಕ್ಷಣ ಆ ಹಣ ಸಾಲದ ಮೊತ್ತಕ್ಕೆ ಜಮೆ ಆಗಿಬಿಡುತ್ತದೆ. ಆದ್ದರಿಂದ ಅಂತಹ ಫಲಾನುಭವಿಗಳು ಖಾತೆ ಬದಲಾಯಿಸಿರುತ್ತಾರೆ. ಇಂಥಾ ಫಲಾನುಭವಿಗಳಿಗೆ ತೊಂದರೆ ಆಗಬಾರದು ಎಂದು ತಿಳಿಸಿದರು.
ಗೃಹಜ್ಯೋತಿ ಗ್ಯಾರಂಟಿ ಯೋಜನೆ ಜಾರಿ ಆಗುವಾಗ ಹೆಚ್ಚಿನ ದುರುಪಯೋಗ ಆಗದ ಹಾಗೆ ಎಚ್ಚರಿಕೆ ವಹಿಸಿದ್ದರು. ಇದೇ ಎಚ್ಚರಿಕೆ ಇತರೆ ಯೋಜನೆಗಳಲ್ಲೂ ಅನುಸರಿಸಿದ್ದರೆ ದುರುಪಯೋಗದ ಪ್ರಮಾಣ ಕಡಿಮೆ ಆಗುತ್ತಿತ್ತು. ಮೃತಪಟ್ಟಿರುವ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಹಣ ಹೋಗುತ್ತಿರುವುದು ಪತ್ತೆಯಾಗಿದೆ. ಈ ರೀತಿ ದುರುಪಯೋಗ ಆಗಬಾರದು. ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ ಅವರ ಮೊಬೈಲಿಗೆ ವಾಯ್ಸ್ ಮೆಸೇಜ್ ಮೂಲಕ ಖಚಿತಪಡಿಸಬೇಕು ಎಂದು ಹೇಳಿದರು.



