ಬೆಂ.ಗ್ರಾ: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ದೇವನಹಳ್ಳಿಯ ಆವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಪುರಜ್ಯೋತಿ ಹೋಗುತ್ತಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಬಣ್ಣಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿಯ ಆವತಿ ಗ್ರಾಮದಲ್ಲಿ ಆಯೋಜಿಸಿದ್ದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪುರಜ್ಯೋತಿ ರಥಯಾತ್ರೆಗೆ ಆವತಿ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕೆಂಪೇಗೌಡರು ಕರುನಾಡು ಕಂಡ ಅಪ್ರತಿಮ ದೂರದೃಷ್ಟಿವುಳ್ಳ ನಾಯಕರು. ಸುಮಾರು 500 ವರ್ಷಗಳ ಹಿಂದೆ ಬೆಂಗಳೂರು ನಿರ್ಮಾಣ ಅವರ ಬಹು ದೊಡ್ಡ ಕೊಡುಗೆಯಾಗಿದೆ. ಇಂದಿನ ಬೆಂಗಳೂರು ಕೋಟ್ಯಂತರ ಉದ್ಯೋಗ ಸೃಷ್ಟಿಸುವ ಜತೆಗೆ ಎಲ್ಲ ವರ್ಗದ ಜನರು ಬದುಕು ಕಟ್ಟಿಕೊಳ್ಳಲು ಕೇಂದ್ರವಾಗಿ ಸಾಕಾರವಾಗಿದೆ ಎಂದು ಹೇಳಿದರು.
ಅವತಿಯಲ್ಲಿ ಕೆಂಪೇಗೌಡ ವಂಶಸ್ಥರು ನೆಲೆಸಿದ ನಾಡು, ಇಲ್ಲಿಂದ ಜ್ಯೋತಿ ರಥಯಾತ್ರೆಯು ಬೆಂಗಳೂರಿನ ಕೆಂಗೇರಿ ಬಳಿಯ ಕೆಂಪೇಗೌಡ ಬಡಾವಣೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸೇರಲಿದೆ. ಜೊತೆಗೆ ರಾಜ್ಯದ ನಾನಾ ಭಾಗಗಳಿಂದ ಕೆಂಪೇಗೌಡ ಪುರಜ್ಯೋತಿಗಳು ಬರಲಿದ್ದು, ಇದು ರಾಜ್ಯದ ಭಾವೈಕ್ಯತೆ ಸಂಕೇತ ಎಂದರು.
ಕಾರ್ಯಕ್ರಮದಲ್ಲಿ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಬಿ. ರಾಜಣ್ಣ, ತಾಲೂಕು ಅಧ್ಯಕ್ಷರಾದ ಸಿ.ಜಗನ್ನಾಥ, ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪಿ. ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ, ಜಿ.ಪಂ ಸಿಇಒ ಡಾ. ವಾಸಂತಿ ಅಮರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಸೇರಿ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.



