ನವದೆಹಲಿ: ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಸಂಕುಚಿತ ನೈಸರ್ಗಿಕ ಅನಿಲ ಬೆಲೆ ಏರಿಕೆಯಾಗಿದ್ದು, ಆ.29ರ ಶನಿವಾರ (ಇಂದು) ಬೆಳಗ್ಗೆ 6 ಗಂಟೆಯಿಂದ ಪ್ರತಿ ಕೆಜಿಗೆ 3.89 ರೂ. ಹೆಚ್ಚಳವಾಗಲಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ತಿಳಿಸಿದೆ.
ಬೆಲೆ ಏರಿಕೆಯ ಬಳಿಕ ದೆಹಲಿಯಲ್ಲಿ CNG ದರವು ಪ್ರತಿ ಕೆಜಿಗೆ 86.98 ರೂ. ತಲುಪಿದೆ. ಇದಕ್ಕೂ ಮೊದಲು CNG ದರ ಪ್ರತಿ ಕೆಜಿಗೆ 83.09 ರೂ. ಇತ್ತು.
ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ LNG (ದ್ರವೀಕೃತ ನೈಸರ್ಗಿಕ ಅನಿಲ) ಬೆಲೆ ತೀವ್ರವಾಗಿ ಏರಿಕೆಯಾಗಿರುವುದು CNG ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು IGL ತಿಳಿಸಿದೆ.
CNG ಉತ್ಪಾದನೆಗೆ ಬಳಸಲಾಗುವ ನೈಸರ್ಗಿಕ ಅನಿಲದ ಗಮನಾರ್ಹ ಪ್ರಮಾಣವನ್ನು ಆಮದು ಮಾಡಿಕೊಳ್ಳುವ LNG ಮೂಲಕ ಪೂರೈಸಲಾಗುತ್ತದೆ. ಸಂಘರ್ಷ ಆರಂಭವಾದ ಬಳಿಕ ಸ್ಪಾಟ್ ಮಾರುಕಟ್ಟೆಯಲ್ಲಿ LNG ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ ಎಂದು ಕಂಪನಿ ಹೇಳಿದೆ.
ಇರಾನ್ ಯುದ್ಧ, ಹಾರ್ಮುಜ್ ಬಿಕ್ಕಟ್ಟು ಸಹ ಕಾರಣ
ಇನ್ನೂ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿರುವ ಸಂದರ್ಭದಲ್ಲೇ ಸಿಎನ್‌ಜಿ ದರ ಪರಿಷ್ಕರಣೆ ಮಾಡಲಾಗಿದೆ. ಇರಾನ್ ಯುದ್ಧ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡಚಣೆಗಳು ಜಾಗತಿಕ ಇಂಧನ ಬೆಲೆಗಳ ಮೇಲೆ ಮತ್ತಷ್ಟು ಒತ್ತಡ ತಂದಿವೆ.




