ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ಕಾನೂನುಬಾಹಿರವಾಗಿ ಕೈಬಿಡಲಾಗುತ್ತಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲೇ ಧರಣಿ ಕುಳಿತ ಹಿನ್ನೆಲೆಯಲ್ಲಿ ತೀವ್ರ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿದೆ.
ನಕಲಿ ‘ಫಾರ್ಮ್-7’ ಸಲ್ಲಿಸಿ ಮತದಾರರ ಹೆಸರು ಡಿಲೀಟ್ ಮಾಡಲು ಯತ್ನಿಸಿದವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳು ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ಆರಂಭಿಸಿದ್ದಾರೆ.
ಮುಖ್ಯಮಂತ್ರಿಗಳ ಜೊತೆಗೆ ಉಪಮುಖ್ಯಮಂತ್ರಿ, ಸಚಿವರಾದ ಜಿ. ಪರಮೇಶ್ವರ್, ಎನ್. ಚಲುವರಾಯಸ್ವಾಮಿ, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಯು.ಟಿ. ಖಾದರ್, ಮಧು ಬಂಗಾರಪ್ಪ, ಶಾಸಕರಾದ ಲಕ್ಷ್ಮಣ ಸವದಿ, ಶಿವಲಿಂಗೇಗೌಡ, ರಿಜ್ವಾನ್ ಅರ್ಷದ್, ಬೈರತಿ ಸುರೇಶ್ ಸೇರಿದಂತೆ ಹಲವು ಪ್ರಮುಖ ನಾಯಕರು ಸ್ಥಳಕ್ಕೆ ಆಗಮಿಸಿ ಧರಣಿಯಲ್ಲಿ ಭಾಗಿಯಾಗಿದ್ದಾರೆ.
ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದ ಕಚೇರಿಗೆ ದಾಂಗುಡಿ ಇಡುತ್ತಿದ್ದಂತೆ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ಆಯೋಗದ ಮುಖ್ಯ ದ್ವಾರವನ್ನೇ ಬಂದ್ ಮಾಡಲಾಯಿತು. ಆಯೋಗದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಪ್ರಕರಣದ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗವು 2 ರಿಂದ 3 ದಿನಗಳ ಕಾಲಾವಕಾಶ ಕೇಳಿದೆ. ಆದರೆ ಇದನ್ನು ಸುತಾರಾಂ ಒಪ್ಪದ ಮುಖ್ಯಮಂತ್ರಿಗಳು ಎಫ್‌ಐಆರ್ ಮಾಡುವವರೆಗೆ ಕಚೇರಿ ಬಿಟ್ಟು ಕದಲುವುದಿಲ್ಲ. ಬೇಕಿದ್ದರೆ ರಾತ್ರಿಯಿಡೀ ಇಲ್ಲೇ ಇರುತ್ತೇವೆ. ದೆಹಲಿಗೆ ಫೋನ್ ಮಾಡುತ್ತೀರೋ ಅಥವಾ ಏನಾದರೂ ಮಾಡಿ, ಎಫ್‌ಐಆರ್ ಆಗುವವರೆಗೆ ರಾಜಿ ಇಲ್ಲ ಎಂದು ಹೇಳಿದ್ದಾರೆ.
ಸಿಎಂ ಆರೋಪಗಳೇನು?
ಸೆಪ್ಟೆಂಬರ್ 22, 23 ಮತ್ತು 24 ರ ಅವಧಿಯಲ್ಲಿ ರಾಜ್ಯದ ಹಲವೆಡೆ ಏಕಾಏಕಿ ಸಾವಿರಾರು ಸಂಖ್ಯೆಯಲ್ಲಿ ಫಾರ್ಮ್-7 (ಮತದಾರರ ಹೆಸರು ತೆಗೆದುಹಾಕಲು ನೀಡುವ ಅರ್ಜಿ) ಸಲ್ಲಿಸಲಾಗಿದೆ. ಬೆಳಗಾವಿ ಉತ್ತರದಲ್ಲಿ ಸುಮಾರು 3,000, ಮೂಡಿಗೆರೆಯಲ್ಲಿ 6,259, ಬಬಲೇಶ್ವರದಲ್ಲಿ 1,373, ನರಸಿಂಹರಾಜ ಕ್ಷೇತ್ರದಲ್ಲಿ 1,200, ಭಾಲ್ಕಿ ಕ್ಷೇತ್ರದಲ್ಲಿ 2,285 ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವ್ಯವಸ್ಥಿತವಾಗಿ ಅರ್ಜಿ ಸಲ್ಲಿಸಲಾಗಿದೆ.
ಅಲ್ಪಸಂಖ್ಯಾತರು, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲು ಈ ಸಂಚು ರೂಪಿಸಲಾಗಿದೆ. ಫಾರ್ಮ್-7 ಹಂಚಿಕೆ ಮಾಡಿದ್ದ ಬಿಜೆಪಿ ಕಾರ್ಯಕರ್ತನೊಬ್ಬ ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡು, ಕ್ರಮ ಕೈಗೊಳ್ಳದಂತೆ ಮನವಿ ಮಾಡಿರುವ ದಾಖಲೆಯನ್ನು ಆಯೋಗಕ್ಕೆ ಸಲ್ಲಿಸಿದ್ದೇನೆ. ಯಾವುದೋ ಏಜೆನ್ಸಿಗೆ ಡೇಟಾ ನೀಡಿ, ಮತದಾರರ ಮಾಹಿತಿ ಕದ್ದು ಈ ಕೃತ್ಯ ಎಸಗಲಾಗಿದೆ ಎಂದು ಸಿಎಂ ಆರೋಪಿಸಿದ್ದಾರೆ.
ಎಸ್‌ಐಆರ್ (SIR) ಮೂಲಕ ಈಗಾಗಲೇ ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಕೈಬಿಡಲಾಗಿತ್ತು. ಬಳಿಕ 4.65 ಕೋಟಿ ಅರ್ಹ ಮತದಾರರ ಪೈಕಿ ಇದೀಗ ಮತ್ತೆ 44 ಲಕ್ಷ ಜನರಿಗೆ ನೋಟಿಸ್ ನೀಡಲಾಗಿದ್ದು, ಇದರಲ್ಲಿ ಫಾರ್ಮ್-7 ಅಕ್ರಮವೇ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.
