ಮಂಡ್ಯ: ಕಟ್ಟುನಿಟ್ಟಿನ ನಿಯಮಗಳಿರಬೇಕಾದ ರಾಷ್ಟ್ರೀಯ ಹೆದ್ದಾರಿಯಲ್ಲೇ ಕೆಲ ಕಿಡಿಗೇಡಿಗಳು ಕಾನೂನನ್ನು ಗಾಳಿಗೆ ತೂರಿದ್ದಾರೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75 ಅನ್ನು ರೇಸ್ ಟ್ರಾಕ್ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನಿಂದ ಕದಬಳ್ಳಿ ಟೋಲ್ ಗೇಟ್‌ವರೆಗಿನ ಹೆದ್ದಾರಿ ರಸ್ತೆಯಲ್ಲಿ ನಿನ್ನೆ ಸಂಜೆ ಕುದುರೆ ಗಾಡಿ ರೇಸ್ ಜೋರಾಗಿಯೇ ನಡೆದಿದೆ. ಪೊಲೀಸ್ ಇಲಾಖೆಯ ಅಥವಾ ಕಾನೂನಿನ ಯಾವುದೇ ಭಯವಿಲ್ಲದೇ, ಹೆದ್ದಾರಿಯ ಮಧ್ಯದಲ್ಲೇ ಕುದುರೆ ಗಾಡಿಗಳನ್ನ ವೇಗವಾಗಿ ಓಡಿಸಲಾಗಿದೆ.
ಈ ಕುದುರೆ ಗಾಡಿ ರೇಸ್ ಹಿಂದೆ ದೊಡ್ಡ ಮಟ್ಟದ ಬೆಟ್ಟಿಂಗ್ ನಡೆದಿರುವ ಆರೋಪ ಕೇಳಿಬಂದಿದೆ. ಲಕ್ಷ-ಲಕ್ಷ ರೂಪಾಯಿ ಹಣವನ್ನ ಬೆಟ್ಟಿಂಗ್ ಕಟ್ಟಿ ಈ ಅಪಾಯಕಾರಿ ರೇಸ್ ನಡೆಸಲಾಗಿದೆ. ಅಷ್ಟೇ ಅಲ್ಲದೆ ಕುದುರೆ ಗಾಡಿ ಬೆನ್ನಲ್ಲೇ ನೂರಾರು ಬೈಕ್‌ಗಳು ಸಹ ಅಜಾಗರೂಕತೆಯಿಂದ ರಸ್ತೆಯಲ್ಲಿ ನುಗ್ಗಿ ಸಂಚಾರ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ.
ಹೆದ್ದಾರಿಯಲ್ಲಿ ಈ ರೀತಿ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದನ್ನ ಕಂಡು ಪ್ರಶ್ನಿಸಲು ಹೋದ ಸಾರ್ವಜನಿಕರಿಗೆ ರೇಸ್‌ನಲ್ಲಿದ್ದವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಇತರೆ ವಾಹನ ಸವಾರರು ಮತ್ತು ಪ್ರಯಾಣಿಕರು ಕೆಲಕಾಲ ತೀವ್ರ ಪರದಾಟ ಹಾಗೂ ಆತಂಕ ಅನುಭವಿಸುವಂತಾಯಿತು.
ಪ್ರಮುಖ ಹೆದ್ದಾರಿಯಲ್ಲಿ ಇಂತಹ ಕಾನೂನುಬಾಹಿರ ಕೃತ್ಯ ಎಸಗಿ, ಸಾರ್ವಜನಿಕರಿಗೆ ತೊಂದರೆ ನೀಡಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಕೂಡಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

