ಮಧ್ಯಪ್ರದೇಶ: ಕಾರು ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಉತ್ತರ ಪ್ರದೇಶದ 23 ವರ್ಷದ ಯೂಟ್ಯೂಬರ್ ಹಾಗೂ ಆಕೆಯ ತಾಯಿ ಇಬ್ಬರೂ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಯೂಟ್ಯೂಬರ್ ತಂದೆ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಜ್ಜಯಿನಿ-ಗರೋತ್ ಹೆದ್ದಾರಿಯ ರಾಮಖೇಡಿ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಗೆ ಅಪಘಾತ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಎರ್ಟಿಗಾ ಕಾರು ಮುಂದೆ ಹೋಗುತ್ತಿದ್ದ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗುರುತಿಸಲಾಗದಷ್ಟು ಹಾನಿಯಾಗಿದೆ. ಡಿಕ್ಕಿಯ ಬಳಿಕ ಟ್ರಕ್ ಕೂಡ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ರಸ್ತೆಯಿಂದ ಕೆಳಗೆ ಬಿದ್ದಿದೆ ಎಂದು ವರದಿಯಾಗಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್ಗೆ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿದ್ದವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಲಾಗಿದ್ದು, ಓರ್ವ ಮಹಿಳೆ ಕಾರಿನ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದರಿಂದ ರಕ್ಷಣಾ ಸಿಬ್ಬಂದಿ ಆಕೆಯನ್ನು ಹೊರತೆಗೆದಿದ್ದಾರೆ.
ತಾಯಿ-ಮಗಳು ಸಾವು:
ಅಪಘಾತದಲ್ಲಿ ಮೃತಪಟ್ಟವರನ್ನು ಉತ್ತರ ಪ್ರದೇಶದ ನಿವಾಸಿಗಳಾದ 50 ವರ್ಷದ ಸಾರಿಕಾ ಹಾಗೂ ಅವರ 23 ವರ್ಷದ ಪುತ್ರಿ ಛವಿ ವರ್ಶ್ನಿ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಬರೋಡ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಕಾರಿನಲ್ಲಿದ್ದ ಛವಿ ಅವರ ತಂದೆ 54 ವರ್ಷದ ಶ್ಯಾಮಲಾಲ್, ಸಂಬಂಧಿ ಸೂರಜ್‌ಪಾಲ್ ಹಾಗೂ ಚಾಲಕ ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ಯಾಮಲಾಲ್ ಅವರು ಉತ್ತರ ಪ್ರದೇಶದ ಮಹೌಖಾಸ್ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಕುಟುಂಬ ಸೋಮವಾರ ರಾತ್ರಿ ಉಜ್ಜಯಿನಿಗೆ ತೀರ್ಥಯಾತ್ರೆಗೆ ತೆರಳಿತ್ತು. ಈ ವೇಳೆ ಮಾರ್ಗಮಧ್ಯೆ ಭೀಕರ ಅಪಘಾತ ಸಂಭವಿಸಿದೆ.
7 ಲಕ್ಷಕ್ಕೂ ಹೆಚ್ಚು ಯೂಟ್ಯೂಬ್ ಚಂದಾದಾರರು:
ಅಪಘಾತದಲ್ಲಿ ಮೃತಪಟ್ಟ ಛವಿ ವರ್ಶ್ನಿ ಜನಪ್ರಿಯ ಯೂಟ್ಯೂಬರ್ ಆಗಿದ್ದರು. ಅವರ ಯೂಟ್ಯೂಬ್ ಚಾನೆಲ್‌ಗೆ 7 ಲಕ್ಷಕ್ಕೂ ಹೆಚ್ಚು ಚಂದಾದಾರರು ಇದ್ದರು. ಇನ್‌ಸ್ಟಾಗ್ರಾಂನಲ್ಲೂ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು.
ಛವಿ ಅವರು 2021ರಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಆರಂಭದಲ್ಲಿ ತಮ್ಮ ದೈನಂದಿನ ಜೀವನಕ್ಕೆ ಸಂಬAಧಿಸಿದ ವ್ಲಾಗ್‌ಗಳು ಹಾಗೂ ಇತರ ವಿಡಿಯೋಗಳನ್ನು ಪ್ರಕಟಿಸುತ್ತಿದ್ದರು. ಬಳಿಕ ಅವರ ಜನಪ್ರಿಯತೆ ಹೆಚ್ಚಿದಂತೆ ಆನ್‌ಲೈನ್ ಗೇಮಿಂಗ್‌ಗೆ ಸಂಬAಧಿಸಿದ ವಿಡಿಯೋಗಳನ್ನು ಕೂಡ ಮಾಡುತ್ತಿದ್ದರು.
ಛವಿ ಬಾಲ್ಯದಿಂದಲೇ ಪ್ರತಿಭಾವಂತೆಯಾಗಿದ್ದರು ಎಂದು ಅವರ ಸಂಬAಧಿ ಸಚಿನ್ ವರ್ಶ್ನಿ ತಿಳಿಸಿದ್ದಾರೆ. ಪದವಿ ಶಿಕ್ಷಣ ಪೂರ್ಣಗೊಳಿಸಿದ್ದ ಅವರು ವಿದ್ಯಾಭ್ಯಾಸದಲ್ಲೂ ಉತ್ತಮ ಸಾಧನೆ ಮಾಡಿದ್ದರು. ಜೀವನದಲ್ಲಿ ವಿಭಿನ್ನವಾದದ್ದನ್ನು ಸಾಧಿಸಬೇಕೆಂಬ ಆಸಕ್ತಿ ಹೊಂದಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಛವಿ ಅವರ ವೃತ್ತಿಜೀವನಕ್ಕೆ ಕುಟುಂಬದವರು ಸಂಪೂರ್ಣ ಬೆಂಬಲ ನೀಡುತ್ತಿದ್ದರು ಎನ್ನಲಾಗಿದೆ.
ಅಪಘಾತದ ಬಳಿಕ ಸಾರಿಕಾ ಮತ್ತು ಛವಿ ಅವರ ಮೃತದೇಹಗಳನ್ನು ಬರೋಡ್‌ನ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಬರೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎರ್ಟಿಗಾ ಕಾರು ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ವೇಗ, ಚಾಲಕರ ನಿರ್ಲಕ್ಷ್ಯ ಸೇರಿದಂತೆ ಇತರ ಕಾರಣಗಳಿದ್ದವೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.




