ಮೈಸೂರು: ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ಕೊಡಗಳ್ಳಿ ಗ್ರಾಮದಲ್ಲಿರುವ ಕೋಳಿ ಫಾರ್ಮ್ ಒಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 600 ಬ್ಯಾಗ್ ಯೂರಿಯಾ ರಸಗೊಬ್ಬರವನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡಲಾದ ರಸಗೊಬ್ಬರದ ಅಂದಾಜು ಮೌಲ್ಯ ಸುಮಾರು 14,40,000 ರೂ. ಎಂದು ಅಂದಾಜಿಸಲಾಗಿದೆ. ರೈತರಿಗೆ ವಿತರಿಸಬೇಕಾದ ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಲು ಯತ್ನಿಸಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆಯಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕರು, ಮೈಸೂರು, ಸಹಾಯಕ ನಿರ್ದೇಶಕರು, ಟಿ. ನರಸೀಪುರ ಹಾಗೂ ಕೃಷಿ ಅಧಿಕಾರಿ, ಬನ್ನೂರು ಇದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು, ರೈತರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಅಕ್ರಮ ರಸಗೊಬ್ಬರ ದಾಸ್ತಾನು ಹಾಗೂ ಕಾಳಸಂತೆ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.



