ನವದೆಹಲಿ: ಏಕೀಕೃತ ಪಾವತಿ ವ್ಯವಸ್ಥೆ ಸೇರಿದಂತೆ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೇಲೆ ಭವಿಷ್ಯದಲ್ಲಿ ಶುಲ್ಕ ವಿಧಿಸಲು ಕೇಂದ್ರ ಸರ್ಕಾರಕ್ಕೆ ಕಾನೂನುಬದ್ಧ ಅಧಿಕಾರ ನೀಡುವ ಮಹತ್ವದ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಇಂದು(ಆ.06) ಅಂಗೀಕರಿಸಿದೆ.
ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ, 2026 ಅನ್ನು ಧ್ವನಿ ಮತದ ಮೂಲಕ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಸದನದಲ್ಲಿ ಗದ್ದಲದ ನಡುವೆಯೇ ಮಧ್ಯಾಹ್ನ 2 ಗಂಟೆಗೆ ಕಲಾಪ ಪುನರಾರಂಭವಾದ ಬಳಿಕ ಯಾವುದೇ ಚರ್ಚೆಯಿಲ್ಲದೇ ಮಸೂದೆಗೆ ಅನುಮೋದನೆ ದೊರೆಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಈ ಮಸೂದೆಯನ್ನು ಮಂಡಿಸಿದ್ದರು.
ಈ ಮಸೂದೆಯು 2007ರ ಪಾವತಿ ಮತ್ತು ಸೆಟ್ಲ್‌ಮೆಂಟ್ ವ್ಯವಸ್ಥೆಗಳ ಕಾಯ್ದೆಯ , ಸೆಕ್ಷನ್ 10ಎ ನ ತಿದ್ದುಪಡಿಯಾಗಿದೆ.
ಭಾರತದಲ್ಲಿ ಡಿಜಿಟಲ್ ಪಾವತಿಗಳ ಮೇಲೆ ಶುಲ್ಕ ವಿಧಿಸಲು ಅವಕಾಶ ಇಲ್ಲದಿರುವುದರಿಂದ ಕಂಪನಿಗಳು ಬೆಳವಣಿಗೆ ಹೊಂದಲು ಕಷ್ಟಕರವಾದ ವಾತಾವರಣವಿದೆ ಎಂದು ಕೆಲವು ಉದ್ಯಮಿಗಳು ಹಿಂದಿನಿಂದಲೂ ವಾದಿಸುತ್ತಿದ್ದರು. ಇದೀಗ ಲೋಕಸಭೆಯಲ್ಲಿ ಅಂಗೀಕಾರ ಆಗಿರುವ ತಿದ್ದುಪಡಿ ಮಸೂದೆಯು ಡಿಜಿಟಲ್ ಪಾವತಿಗಳ ಮೇಲೆ ಎಂಡಿಆರ್ ವಿಧಿಸಲು ಅವಕಾಶ ಕಲ್ಪಿಸಿದೆ. 2,000 ರೂ.ಗಿಂತಲೂ ಹೆಚ್ಚು ಮೊತ್ತದ ವಹಿವಾಟಿನ ಮೇಲೆ ಶೇ 0.3 ರಿಂದ ಶೇ 0.5 ರ ವರೆಗೆ ಎಂಡಿಆರ್ ವಿಧಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ.
ಎಂಡಿಆರ್ ಅಂದ್ರೆ ಏನು?
ಎಂಡಿಆರ್ ಅಂದ್ರೆ ʻಮರ್ಚೆಂಟ್ ಡಿಸ್ಕೌಂಟ್ ರೇಟ್ʼ. ಎಲೆಕ್ಟ್ರಾನಿಕ್ ವಿಧಾನದಲ್ಲಿ ನಡೆಸುವ ವಹಿವಾಟಿನ ಮೇಲೆ (ಬೇರೆಯವರಿಗೆ ಪಾವತಿ ಅಥವಾ ಗ್ರಾಹಕರಿಂದ ಸ್ವೀಕರಿಸುವ ಹಣ) ಬ್ಯಾಂಕುಗಳು ಅಥವಾ ಎಲೆಕ್ಟ್ರಾನಿಕ್ ಪಾವತಿ ಸೇವೆ ನೀಡುವ ಕಂಪನಿಗಳು ವರ್ತಕರಿಗೆ ವಿಧಿಸುವ ಶುಲ್ಕ. ಗ್ರಾಹಕರಿಗೆ ಇದು ಅನ್ವಯಿಸುವುದಿಲ್ಲ.
ಈ ತಿದ್ದುಪಡಿ ಏಕೆ ಮಹತ್ವದ್ದು?
ಈವರೆಗೆ 2007ರ ಕಾಯ್ದೆಯ ಸೆಕ್ಷನ್ 10ಎ ಪ್ರಕಾರ, ಆದಾಯ ತೆರಿಗೆ ಕಾಯ್ದೆ –1961ರ ಸೆಕ್ಷನ್ 269ಎಸ್‌ಯು ಅಡಿಯಲ್ಲಿ ಹೇಳಿರುವಂತೆ ಯಾವುದೇ ವ್ಯಕ್ತಿ ಎಲೆಕ್ಟ್ರಾನಿಕ್ ಮಾದರಿಯಲ್ಲಿ ಮಾಡುವ ಪಾವತಿ ಅಥವಾ ಸ್ವೀಕರಿಸುವ ಹಣಕ್ಕೆ ಯಾವುದೇ ಬ್ಯಾಂಕ್ ಅಥವಾ ಸೇವಾದಾರರು (ಕಂಪನಿಗಳು) ನೇರವಾಗಿ ಅಥವಾ ಪರೋಕ್ಷವಾಗಿ ಶುಲ್ಕ ವಿಧಿಸುವಂತಿರಲಿಲ್ಲ.
ವಾರ್ಷಿಕ 50 ಕೋಟಿ ರೂಪಾಯಿಗಿಂತಲೂ ಹೆಚ್ಚು ವಹಿವಾಟು ನಡೆಸುವ ವ್ಯಾಪಾರ ಸಂಸ್ಥೆಗಳು ಗ್ರಾಹಕರಿಗೆ ʻBHIM-UPI QRʼ ಕೋಡ್ ಹಾಗೂ RuPay ಡೆಬಿಟ್ ಕಾರ್ಡ್ ಸೇರಿದಂತೆ ನಿಗದಿತ ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಒದಗಿಸಬೇಕು ಎಂಬ ನಿಯಮ ಈಗಲೂ ಜಾರಿಯಲ್ಲಿದೆ. ಈ ಕಾನೂನು ನಿರ್ಬಂಧದಿಂದಾಗಿ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್ – Merchant Discount Rate ಅನ್ನು ವಿಧಿಸಲು ಸಾಧ್ಯವಾಗುತ್ತಿರಲಿಲ್ಲ. ಹೊಸ ತಿದ್ದುಪಡಿಯಿಂದ ಈ ಕಾನೂನುಬದ್ಧ ನಿರ್ಬಂಧ ತೆರವಾಗಿದ್ದು, ಭವಿಷ್ಯದಲ್ಲಿ ಸರ್ಕಾರ ಅಗತ್ಯವೆಂದು ಕಂಡರೆ MDR ಜಾರಿಗೆ ಅವಕಾಶ ಸಿಗಲಿದೆ.
ಹೊಸ ಕಾನೂನಿನಲ್ಲಿ ಏನು ಬದಲಾಗಿದೆ?
ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ)–2026 ಮಸೂದೆಯಲ್ಲಿ 2007ರ ಪಾವತಿ ಮತ್ತು ಸೆಟ್ಲ್‌ಮೆಂಟ್ ವ್ಯವಸ್ಥೆಗಳ ಕಾಯ್ದೆಯ ಸೆಕ್ಷನ್ 10ಎಗೆ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಯ ಪ್ರಕಾರ, ಯಾವ ಡಿಜಿಟಲ್ ಪಾವತಿ ವಿಧಾನಗಳಿಗೆ ಶುಲ್ಕ ವಿಧಿಸಬಹುದು ಎಂಬುದನ್ನು ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಅಧಿಸೂಚನೆ (Notification) ಮೂಲಕ ನಿರ್ಧರಿಸುವ ಅಧಿಕಾರ ಪಡೆಯಲಿದೆ.
ಈ ಮಸೂದೆ ಅಂಗೀಕಾರ ಆದ ತಕ್ಷಣವೇ UPI ವ್ಯವಹಾರಗಳಿಗೆ ಶುಲ್ಕ ಜಾರಿಗೆ ಬರುತ್ತದೆ ಎಂಬುದಲ್ಲ. ಸರ್ಕಾರ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ ಬಳಿಕ ಮಾತ್ರ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಪೂರೈಕೆದಾರರು (Payment Service Providers – PSPs) ಶುಲ್ಕ ವಿಧಿಸಲು ಸಾಧ್ಯವಾಗುತ್ತದೆ. ಅದುವೆರೆಗೆ UPI ವ್ಯವಹಾರಗಳು ಉಚಿತವಾಗಿಯೇ ಮುಂದುವರಿಯಲಿವೆ.

