ವಿಜಯನಗರ: ಮುಂಬಡ್ತಿಗಾಗಿ ಪದವಿಯ ನಕಲಿ ಅಂಕಪಟ್ಟಿ ಮತ್ತು ಮೈಗ್ರೇಶನ್ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ ಎಂಬ ಗಂಭೀರ ಆರೋಪದಡಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯತಿ ನರೇಗಾ ಸಹಾಯಕ ನಿರ್ದೇಶಕ ಉಮೇಶ್ ಗೌಡ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಪರವಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶೈಲಾ ಎಸ್.ಕುಲಕರ್ಣಿ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಈ ಹಿಂದೆ ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯಿತಿನಲ್ಲಿ ಅನುಕಂಪದ ಆಧಾರದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಕೆಲಸ ಪಡೆದ ಉಮೇಶ್ ಗೌಡ, ಮುಂಬಡ್ತಿ ಪಡೆಯುವ ದುರುದ್ದೇಶದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹೆಸರಲ್ಲಿ 2007, 2008 ಮತ್ತು 2009ನೇ ಸಾಲಿನ ಬಿಎ ಪದವಿಯ ನಕಲಿ ಅಂಕಪಟ್ಟಿ, ಪಾಸಿಂಗ್ ಸರ್ಟಿಫಿಕೆಟ್, ಮೈಗ್ರೇಶನ್ ಸೃಷ್ಟಿ ಮಾಡಿಕೊಂಡು ಕಾರ್ಯನಿರ್ವಾಹಕ ಅಧಿಕಾರಿ ಅವರಿಂದ ದೃಢೀಕರಿಸಿಕೊಂಡು ಮುಂಬಡ್ತಿ ಪಡೆದುಕೊಂಡಿದ್ದಾರೆ.
ಹೀಗಾಗಿ ಹಗರಿಬೊಮ್ಮಹಳ್ಳಿ ತಾಲೂಕು ಪಂಚಾಯ್ತಿಯಲ್ಲಿ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಉಮೇಶ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.